ಮಂಗಳೂರು : ದ.ಕ. ಜಿಲ್ಲಾ ಡಿವೈಎಫ್‌ಐ ವತಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರಲ್ಲಿ ಪಂಜಿಮೊಗರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನೇಮಿಸಲ್ಪಟ್ಟ ‘ಸಿಐಡಿ’ ಬದಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿತು.
ಪಂಜಿಮೊಗರು ಬಳಿ ತಾಯಿ ರಝಿಯಾ ಮತ್ತು ಮಗಳು ಫಾತಿಮಾ ಝುವಾ ಎಂಬವರನ್ನು 2011ರ ಜೂ.28ರಂದು ಈ ಕೊಲೆ ಮಾಡಲಾಗಿತ್ತು. ಪ್ರಕರಣ ನಡೆದು 5 ವರ್ಷವಾದರೂ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಐದು ವರ್ಷದಿಂದ ಡಿವೈಎಫ್‌ಐ ಸಾಕಷ್ಟು ಹೋರಾಟ ನಡೆಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಡಿವೈಎಫ್‌ಐ ಆಗ್ರಹಿಸಿದ್ದರೂ ಕೂಡ ಸರಕಾರ ಸಿಐಡಿಗೆ ಒಪ್ಪಿಸಿದೆ. ಹಾಗಾಗಿ ತನಿಖೆಯನ್ನು ಸಿಐಡಿಯಿಂದ ವಾಪಸ್ ಪಡೆಯಬೇಕು. ವಿಶೇಷ ತನಿಖಾ ತಂಡಕ್ಕೆ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಕಳೆದ ಚುನಾವಣೆ ಸಂದರ್ಭ ಮೊಯ್ದಿನ್ ಬಾವಾ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿ ಚುನಾವಣೆಯಲ್ಲಿ ಜಯಿಸಿದ್ದರು . ಆದರೆ, ಶಾಸಕರಾದ ಬಳಿಕವೂ ಅವರು ಭರವಸೆ ಈಡೇರಿಸಿಲ್ಲ. ಹಾಗಾಗಿ ಶಾಸಕರ ಮನೆಗೆ ಚಲೋ ಮಾಡುವುದಾಗಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಪ್ರತಿಭಟನೆ ರಝಿಯಾರ ಪತಿ ಹಮೀದ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ. ಶೆಟ್ಟಿ, ಶಮೀಮಾ ತಣ್ಣೀರುಬಾವಿ, ಭಾರತಿ ಬೋಳಾರ್, ಜಯಲಕ್ಷ್ಮಿ, ಆಶಾ ಬೋಳಾರ್, ಸಿಲ್ವಿಯಾ ಜೋಕಟ್ಟೆ, ಅಬೂಬಕರ್ ಜೋಕಟ್ಟೆ, ರಫೀಕ್ ಹರೇಕಳ, ಸಾದಿಕ್ ಕಣ್ಣೂರು, ಅಶ್ರಫ್ ಹರೇಕಳ, ಹಬೀಬ್ ಖಾದರ್, ಮುಹಮ್ಮದ್ ಸಾಲಿ ಮತ್ತಿತರರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English