ಉಳ್ಳಾಲ : ಉಚ್ಚಿಲದ ಬೀಚ್ ರಸ್ತೆಯ ಮಹಾರಾಣಿ ಫಾರ್ಮ್ ನಲ್ಲಿ ರೇವ್ ಪಾರ್ಟಿಯನ್ನು ನಡೆಸುತ್ತಿದ್ದ ಯುವಕರಿಗೆ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿ ರೆಸಾರ್ಟ್‌ನ ಸೊತ್ತುಗಳನ್ನು ದ್ವಂಸ ಮಾಡಿದ್ದಾರೆ. ಪಾರ್ಟಿ ಹೆಸರಿನಲ್ಲಿ ಮಾದಕವಸ್ತು ಸೇವಿಸಿ ತಡರಾತ್ರಿವರೆಗೆ ಯುವಕರ ಗುಂಪೊಂದು ಮೋಜು ನಡೆಸುತ್ತಿತ್ತು. ಸ್ಥಳೀಯ ಬಜರಂಗದಳದ ಸುಮಾರು 30ಕ್ಕೂ ಅಧಿಕ ಸದಸ್ಯರ ತಂಡ ರೆಸಾರ್ಟ್‌ಗೆ ಬಂದು ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಪಾರ್ಟಿಯಲ್ಲಿದ್ದ ಯುವಕರು ಉಡಾಫೆಯಾಗಿ ವರ್ತಿಸಿದ್ದು, ಇದರಿಂದ ಕೆರಳಿದ ಬಜರಂಗ ದಳದ ಕಾರ್ಯಕರ್ತರು ಪಾರ್ಟಿಯಲ್ಲಿ ನಿರತರಾಗಿದ್ದ ಯುವಕರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದು. ಹೊಡೆದಾಟದ ಸಂದರ್ಭದಲ್ಲಿ ರೆಸಾರ್ಟ್‌ಗೆ ಸೇರಿದ ವಸ್ತುಗಳಿಗೆ ಹಾನಿಯಾಗಿವೆ. ರೆಸಾರ್ಟ್‌ನ ಪ್ರಬಂದಕ ದಯಾನಂದ್ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮಂಗಳೂರಿನ ಯುವಕರ ತಂಡ ರಾಬಿನ್ ಎಂಬಾತನ ಹುಟ್ಟು ಹಬ್ಬದ ಪಾರ್ಟಿ ಭಾನುವಾರ ಆಚರಿಸುತ್ತಿದ್ದರು. ತಡರಾತ್ರಿ ನಡೆಯುತ್ತಿದ್ದ ಪಾರ್ಟಿಯನ್ನು ನಿಲ್ಲಿಸಲು ಹೋದ ಬಜರಂಗದಳದ ಕಾರ್ಯಕರ್ತರು ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವಕರ ತಂಡಕ್ಕೆ ಹಲ್ಲೆ ನಡೆಸಿದ್ದು 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ರೆಸಾರ್ಟ್‌ನ ಪ್ರಬಂಧಕ ದಯಾನಂದ ಪೂಜಾರಿ, ಮಂಗಳೂರಿನ ಸ್ವರೂಪ್, ಸಂದೇಶ್, ಮಿಥುನ್, ರಾಹುಲ್, ರಘುನಾಥ್ ಎಂಬವರಾಗಿದ್ದು, ಹಲ್ಲೆಗೊಳಗಾದವರು ಮಂಗಳೂರಿನ ಕಾಲ್ ಸೆಂಟರ್ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಾಗಿದ್ದಾರೆ. ಘಟನೆ ಸಂಬಂಧಿಸಿದಂತೆ ಬಜರಂಗದಳದ ಶರಣ್ ಪಂಪ್‌ವೆಲ್, ಕುಂಟ ಗಣೇಶ್ ಕುಂಪಲ, ಉದಯ, ಮುನ್ನ ,ದಿನೇಶ್, ಪುಷ್ಪರಾಜ್ ಶೆಟ್ಟಿ ಕೋಟೆಕಾರು ಎಂಬವರ ಮೇಲೆ ದರೋಡೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ.
ಇಂತಹ ರೇವ್ ಪಾರ್ಟಿಯನ್ನು ಡ್ರಗ್ ಮಾಫಿಯಗಳು ಆಯೋಜಿಸುತ್ತಿದ್ದು, ಇತ್ತೀಚೆಗೆ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ ಮಾಫಿಯಗಳು ಕಾರ್ಯವೆಸಗುತ್ತಿವೆ. ಇದರ ವಿರುದ್ಧ ಬಜರಂಗದಳ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದು, ನಿನ್ನೆ ನಡೆದ ಪಾರ್ಟಿಗೂ ಡ್ರಗ್ ಮಾಫಿಯಕ್ಕೂ ಸಂಬಂಧ ಇದೆ ಎಂದು ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಫಾರ್ಮ್ ಹೌಸ್‌ನ ದಯಾನಂದ್ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಉಳ್ಳಾಲ ಪೊಲೀಸ್ ಮೂಲಗಳು ತಿಳಿಸಿವೆ.
Click this button or press Ctrl+G to toggle between Kannada and English