ಮಂಗಳೂರು : ಭಾರತದಲ್ಲಿರುವ ಅಮೂಲ್ಯ ಪ್ರಾಚೀನ ವಸ್ತುಗಳು ಈಗ ಹೊರ ದೇಶದಲ್ಲಿವೆ. ಕೋಹಿನೂರ್ ವಜ್ರದಿಂದ ಹಿಡಿದು ಇನ್ನೂ ಅನೇಕ ಬೆಲೆ ಬಾಳುವ ಐತಿಹಾಸಿಕ ವಸ್ತುಗಳು ಪರಕೀಯರ ದಾಳಿ ವೇಳೆ ಭಾರತದಿಂದ ಬೇರೆ ದೇಶ ತಲುಪಿದ್ದು ಇಂದಿಗೂ ಅವುಗಳನ್ನು ವಾಪಸ್ ತರಲು ಇಂದಿಗೂ ಸಾಧ್ಯವಿಲ್ಲ.
ರಾಜರುಗಳ ಆಡಳಿತ ಕಾಲದಲ್ಲಿ ಇಲ್ಲಿನ ಅದ್ಭುತ ವಸ್ತುಗಳು, ಅನ್ಯದೇಶದ ಸ್ವತ್ತಾಗಿದೆ. ಕೋಹಿನೂರ್ ವಜ್ರವನ್ನಂತೂ ಪುರಾಣ ಪ್ರಸಿದ್ಧ ಶಮಂತಕ ಮಣಿಯೆಂದೇ ಪರಿಗಣಿಸಲಾಗಿದೆ. ಇಂತಹ ಅನೇಕ ವಸ್ತುಗಳು ಈಗ ಎಲ್ಲಿವೆ ಎಂಬುದರ ಬಗ್ಗೆ ಮಾಹಿತಿಯೇ ಲಭ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಶಿವಲಿಂಗವಿರುವ ಭಾರತದ ಪ್ರಸಿದ್ಧ ದೇವಾಲಯಕ್ಕೆ ಸಂಬಂಧಿಸಿದ ವಜ್ರವೊಂದು ಬೇರೆ ರಾಷ್ಟ್ರದಲ್ಲಿರುವುದು ಈಗ ಪತ್ತೆಯಾಗಿದೆ.
ಹೌದು ತ್ರಯಂಬಕೇಶ್ವರ ದೇವಾಲಯದಲ್ಲಿರುವ ಶಿವಲಿಂಗಕ್ಕೆ ಸಂಬಂಧಿಸಿದ ವಜ್ರ ಲೆಬನಾನ್ ದೇಶದಲ್ಲಿದೆ. ಈ ವಜ್ರವನ್ನು ಶಿವನ ತ್ರಿನೇತ್ರ(ಮೂರನೇ ಕಣ್ಣು) ಎಂದೇ ಭಾವಿಸಲಾಗಿದೆ.
ತ್ರಯಂಬಕೇಶ್ವರ ದೇವಾಲಯದ ಶಿವನ ವಿಗ್ರಹದ ಮೇಲಿದ್ದ ಈ ನೀಲಿ ಬಣ್ಣದ ವಜ್ರ “ನಾಸಾಕ್” 43 ಕ್ಯಾರೆಟ್ ನದ್ದಾಗಿದ್ದು 8,676 ಗ್ರಾಮ್ ತೂಕವಿದೆ. ವಿಶ್ವದ ಕೆಲವೇ ಕೆಲವು ದೊಡ್ಡ ವಜ್ರಗಳಲ್ಲಿ ಇದೂ ಸಹ ಒಂದಾಗಿದೆ. ತ್ರಯಂಬಕೇಶ್ವರ ದೇವಾಲಯಕ್ಕೆ ಸಂಬಂಧಿಸಿದ ವಜ್ರ ಭಾರತದ ಮೇಲೆ ವಿದೇಶಿ ರಾಜರು ಆಕ್ರಮಣ ಮಾಡಿದ ವೇಳೆಯಲ್ಲಿ ವಿದೇಶಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ.
ತ್ರಯಂಬಕೇಶ್ವರದ ಲಲಿತಾ ಶಿಂಧೆ ಎಂಬುವವರು ಲೆಬನಾನ್ ನ ಮ್ಯೂಸಿಯಂ ನಲ್ಲಿರುವ ಈ ವಜ್ರವನ್ನು ವಾಪಸ್ ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ಭಾರತ ಸರ್ಕಾರ ಕ್ರಮ ಕೈಗೊಳ್ಳದೇ ಇದ್ದರೆ ಕೋರ್ಟ್ ಮೊರೆ ಹೋಗುವುದಾಗಿಯೂ ಎಚ್ಚರಿಸಿದ್ದಾರೆ. ನಾಸಾಕ್ ವಜ್ರವನ್ನು ಇಂದಿನ ತೆಲಂಗಾಣ ಪ್ರದೇಶದಲ್ಲಿ ತಯಾರಿಸಲಾಗಿದ್ದು ಸುಮಾರು 15 ನೇ ಶತಮಾನದ್ದು ಎಂದು ಹೇಳಲಾಗುತ್ತಿದೆ.
Click this button or press Ctrl+G to toggle between Kannada and English