ಬಂಟ್ವಾಳ : ಬಿಸಿ ರೋಡ್ ನಲ್ಲಿ ಜುಲೈ 4 ಮಂಗಳವಾರ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಶುಕ್ರವಾರ ರಾತ್ರಿ ಮೃತಪಟ್ಟ ಶರತ್ ಮಡಿವಾಳರ ಮೃತದೇಹ ಆಸ್ಪತ್ರೆಯಿಂದ ಮೆರವಣಿಗೆಯ ಮೂಲಕ ಸಾಗಿ ಅವರ ಸ್ವಗ್ರಾಮವಾದ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರಿಗೆ ತಲುಪಿದ್ದು, ಮಧ್ಯಾಹ್ನ ವೇಳೆ ಶರತ್ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಇಂದು ಮಧ್ಯಾಹ್ನದ ವೇಳೆಗೆ ಶರತ್ ಸ್ವಗ್ರಾಮಕ್ಕೆ ತಲುಪಿದ ಮೃತದೇಹವನ್ನು ಧಾರ್ಮಿಕ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘಪರಿವಾರದ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ಅಂತಿಮದರ್ಶನ ಪಡೆದರು.
ಶನಿವಾರ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆಯ ಮೂಲಕ ಮಂಗಳೂರಿನ ಎ.ಜೆ. ಆಸ್ಪತ್ರೆಯಿಂದ ಹೊರಟ ಮೃತದೇಹ ನಂತೂರು, ಪಡೀಲ್, ಬಿ.ಸಿ.ರೋಡ್, ಮೆಲ್ಕಾರ್ ಮಾರ್ಗವಾಗಿ 1:50ರ ಸುಮಾರಿಗೆ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಕಂದೂರಿಗೆ ತಲುಪಿದೆ.
ಕಂದೂರಿನಲ್ಲಿರುವ ಯುವಕ ಮಂಡಲದ ಬಳಿ ಸಾರ್ವಜನಿಕ ಅಂತ್ಯದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸ್ಥಳದಲ್ಲಿ ಸಾವಿರಾರು ಮಂದಿ ಸೇರಿದ್ದರು. ಶರತ್ ಮಡಿವಾಳ ಅಂತಿಮ ಸಂಸ್ಕಾರ ಸ್ವಗ್ರಾಮ ಬಂಟ್ವಾಳದ ಸಜಿಪಮೂಡ ಗ್ರಾಮದ ಕಂದೂರಿನಲ್ಲಿ ಅಪಾರ ಜನ ಸಾಗರದ ನಡುವೆ ನಡೆಸಲಾಯಿತು. ಸಾರ್ವಜನಿಕ ಅಂತ್ಯದರ್ಶನದ ಬಳಿಕ ಕಂದೂರಿನಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಮಡಿವಾಳ ಪಡ್ಪು ಶರತ್‍ರವರ ಮನೆಗೆ ಸಾಗಿಸಿ ಮನೆಯ ಸಮೀಪದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಇದಕ್ಕೂ ಮೊದಲು ಮೃತದೇಹವನ್ನು ಮೆರವಣಿಗೆಯಲ್ಲಿ ಹುಟ್ಟೂರು ಬಂಟ್ವಾಳಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು. ಶವಯಾತ್ರೆ ಬಿ.ಸಿ. ರೋಡ್‌ನ ಕೈಕಂಬಕ್ಕೆ ಆಗಮಿಸಿದಾಗ ಶರತ್ ಕೆಲಸ ಮಾಡುತ್ತಿದ್ದ ಉದಯ ಲಾಂಡ್ರಿ ಮುಂಭಾಗದಲ್ಲಿ ನೂರಾರು ಶೋಕತಪ್ತ ಅಭಿಮಾನಿಗಳು ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ನೋವನ್ನು ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಬಿ.ಸಿ. ರೋಡ್‌ನಲ್ಲಿ ಶರತ್ ಮೃತದೇಹ ಸಾಗುವ ವೇಳೆ ಎರಡು ಕಡೆ ಲಾಠಿ ಚಾರ್ಜ್ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿತು. ಬಿಸಿರೋಡ್ ಕೈಕಂಬದಲ್ಲಿ ಮೆರವಣಿಗೆ ಸಾಗುವ ವೇಳೆ ಕಲ್ಲು ತೂರಾಟ ನಡೆದಿದ್ದು ಈ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಮತ್ತೊಂದೆಡೆ ಬಿ.ಸಿ. ರೋಡ್‌ನಲ್ಲಿ ಶರತ್ ಮೃತದೇಹವನ್ನು ಇಳಿಸಲು ಸಂಘ ಪರಿವಾರದ ಕಾರ್ಯಕರ್ತರು ಮುಂದಾಗಿದ್ದು, ಈ ಸಂದರ್ಭ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಈ ಬೆಳವಣಿಗೆಯಿಂದಾಗಿ ಜಿಲ್ಲೆಯಾದ್ಯಂತ ಉದ್ವಿಗ್ನ ವಾತಾವರಣ ನೆಲೆಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Click this button or press Ctrl+G to toggle between Kannada and English