ದೇವಾಲಯಗಳು ಧಾರ್ಮಿಕ ಭಾವನೆ ಅಧಿಕಗೊಳಿಸುವ ತಾಣ -ಬಿ.ರಮಾನಾಥ ರೈ

8:41 PM, Saturday, July 8th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Kukke Subhramanya ಸುಬ್ರಹ್ಮಣ್ಯ: ಭಕ್ತಾಧಿಗಳು ತಮ್ಮ ಅಭೀಷ್ಠತೆಗಳನ್ನು ಪೂರೈಸಲು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಪ್ರಯೋಜನಕಾರಿಯಾಗಿದೆ. ದೇವಾಲಯಗಳು ಸಮಾಜಕ್ಕೆ ಸುeನವನ್ನು ಬೋಧಿಸುವ ಕೇಂದ್ರವಾಗಬೇಕು. ಸಮಾಜಕ್ಕೆ ಧಾರ್ಮಿಕ ಭಾವನೆಯ ಕಾಳಜಿಯನ್ನು ಅಧಿಕಗೊಳಿಸುವ ತಾಣವಾಗಬೇಕು. ದೇವಳದ ಆರ್ಥಿಕ ಸಂಪತ್ತನ್ನು ಕೇವಲ ವೈಧಿಕ ವಿದಿವಿಧಾನಗಳಿಗೆ ಸೀಮಿತಗೊಳಿಸದೆ ಇವುಗಳನ್ನು ಸಾಮಾಜಿಕ ಕೆಲಸಕಾರ್ಯಗಳಿಗೆ ವಿನಿಯೋಗಿಸಬೇಕು. ಇದರಿಂದ ಸಮಾಜದ ಅಭಿವೃದ್ಧಿಯು ಉಂಟಾಗುತ್ತದೆ. ರಾಜ್ಯದ ನಂಬರ್ ವನ್ ಆದಾಯ ತರುವ ದೇವಳದಲ್ಲಿ ನೆರವೇರುತ್ತಿರುವ ಮಾಸ್ಟರ್ ಪ್ಲಾನ್ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳನ್ನು ತೌರಿತಗೊಳಿಸುವಂತೆ ಮಾಡುವಲ್ಲಿ ಶ್ರೀ ದೇವಳದ ನೂತನ ಆಡಳಿತ ಮಂಡಳಿ ಶ್ಲಾಘನೀಯ ಕಾರ್ಯ ಮಾಡಿದೆ. ಕ್ಷೇತ್ರದ ಆಭಿವೃದ್ಧಿಯಿಂದ ಭಕ್ತರಿಗೆ ವಿಶೇಷ ಅನುಕೂಲತೆ ಮತ್ತು ಸಹಕಾರ ದೊರಕುತ್ತದೆ. ಭಕ್ತರಿಗೆ ಅನುಕೂಲತೆ ಸೃಷ್ಠಿಸುವುದು ಮಾಸ್ಟರ್ ಪ್ಲಾನ್ ಯೋಜನೆಗಳ ಪ್ರಧಾನ ಉದ್ಧೇಶ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನೆರವೇರುತ್ತಿರುವ ಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ 180 ಕೋಟಿ ರೂ ವೆಚ್ಚದ ಮಾಸ್ಟರ್ ಪ್ಲ್ಯಾನ್ ಯೋಜನೆಯಲ್ಲಿ ಸುಮಾರು 20 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀ ದೇವಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಅನುಕೂಲತೆಗಾಗಿ ಮತ್ತು ಶ್ರೀ ದೇವಳದ ಆಧೀನತೆಯ ವಿದ್ಯಾಸಂಸ್ಥೆಗಳ ಸಿಬ್ಬಂಧಿಗಳ ವೇತನ ಶ್ರೇಣಿಯ ಕುರಿತು ಕಾನೂನಾತ್ಮಕ ತಿದ್ದುಪಡಿಯನ್ನು ಶೀಘ್ರ ತರಲಾಗುವುದು ಎಂದರು.

Kukke Subhramanya ಕ್ಷೇತ್ರದ ಪ್ರಗತಿಗೆ ಅಭಿವೃದ್ಧಿ ಕೆಲಸಗಳು ಪೂರಕವಾಗುತ್ತದೆ. ಮೂಲ ಸೌಕರ್ಯಗಳನ್ನು ಭಕ್ತರಿಗೆ ಒದಗಿಸುವುದು ಭಗವಂತನ ಪ್ರೀತಿಗೆ ಪಾತ್ರವಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ಮಠದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಶ್ರೀ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುವ ಸ್ಥಳಗಳಲ್ಲಿ ಶ್ರೀ ಮಠದ ಆಸ್ತಿಗಳು ಇದೆ. ಆದರೆ ಈ ಸ್ವತ್ತುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾನು ಪ್ರಧಾನನಲ್ಲ. ನಾನು ಹಿರಿಯರು ಒದಗಿಸಿದ ಮಠದ ಸ್ವತ್ತನ್ನು ನಿರ್ವಹಿಸುವ ವ್ಯಕ್ತಿ ಮಾತ್ರ. ದೇವರ ಹೆಸರಿನ ಮಠದ ಎಲ್ಲಾ ಸ್ವತ್ತುಗಳನ್ನು ಇದನು ನಿರ್ವಹಿಸಲು ಕಾವಲು ಸಮಿತಿಯವರು ಇದ್ದಾರೆ. ಅವರಲ್ಲಿ ಚರ್ಚಿಸಿ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗುವಂತೆ ಶ್ರೀ ಮಠದಿಂದ ಅನುಕೂಲತೆ ಮಾಡಿಕೊಡಲಾಗುವುದು ಎಂದು ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ವಲ್ಲೀಶ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಚಿವ ರಮಾನಾಥ ರೈ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತೂಗು ಸೇತುವೆ ಸರದಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರನ್ನು ಸಚಿವ ರಮಾನಾಥ ರೈ ಸನ್ಮಾನಿಸಿ ಗೌರವಿಸಿದರು.

ನಾವು ದೇವಳದ ವತಿಯಿಂದ ಶಾಸಕರನ್ನು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರನ್ನು ಗೌರವಾನ್ವಿತವಾಗಿ ಆಹ್ವಾನಿಸಿದ್ದೆವು. ಅವರು ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಕಾರ್ಯಕ್ರಮಕ್ಕೆ ಬಾರದಿದ್ದುದು ತುಂಬಾ ನೋವು ತಂದಿದೆ. ಕ್ಷೇತ್ರದಲ್ಲಿ ನಾವು ದೇವರ ಸೇವೆ ಮಾಡುತ್ತಿದ್ದೇವೆ. ಇಲ್ಲಿ ನಾವು ಯಾವುದೇ ರಾಜಕೀಯ ಮಾಡಲಿಲ್ಲ. ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತೇವೆ. ಸರ್ವರನ್ನೂ ಸಮಾನಾನವಾಗಿ ಕಾಣುತ್ತೇವೆ ಎಂದು ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ನುಡಿದರು.

ಸಮಾರಂಭದಲ್ಲಿ ಧಾರ್ಮಿಕ ದತ್ತಿ ಆಯುಕ್ತ ಎಸ್.ಪಿ,ಷಡಾಕ್ಷರಿ ಸ್ವಾಮಿ,ತೂಗು ಸೇತುವೆ ಸರದಾರ ಗಿರೀಶ್ ಭಾರದ್ವಾಜ್, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್, ಪದ್ಮನಾಭ ಕೋಟ್ಯಾನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಲೋಕೋಪಯೋಗಿ ಅಭಿಯಂತರ ಕಾಂತರಾಜ್ ಬಿ.ಟಿ, ದ.ಕ ಜಿಲ್ಲಾ ಧಾರ್ಮಿಕ ದತ್ತಿ ಇಲಾಖಾ ಸಹಾಯಕ ಆಯುಕ್ತೆ ಪ್ರಮೀಳಾ, ರಾಜೀವ ಗಾಂಧಿ ವಿಶ್ವದ್ಯಾನಿಲಯದ ಸೆನೆಟ್ ಸದಸ್ಯ ಡಾ.ರಘು ಮುಖ್ಯಅತಿಥಿಗಳಾಗಿದ್ದರು. ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್, ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಮಾಧವ.ಡಿ, ರಾಜೀವಿ ಆರ್ ರೈ, ದಮಯಂತಿ ಕೂಜುಗೋಡು, ಮಾಸ್ಟರ್ ಪ್ಲಾನ್ ಅಭಿವೃದ್ಧಿ ಸಮಿತಿ ಸದಸ್ಯ ಶಿವರಾಮ ರೈ, ಸುಧೀರ್ ಶೆಟ್ಟಿ ಮತ್ತು ಕೆ.ಪಿ.ಗಿರಿಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂತನ ರಥದ ಶೆಡ್ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಲೋಕಾರ್ಪಣೆಗೊಳಿಸಿದರು. ಒಳಚರಂಡಿ ಯೋಜನೆಯನ್ನು ಹಾಗೂ ವಿವಿಐಪಿ ಬೋಜನಾ ಕೊಠಡಿಯನ್ನು ಧಾರ್ಮಿಕ ದತ್ತಿ ಆಯುಕ್ತ ಎಸ್.ಪಿ.ಷಡಾಕ್ಷರಿ ಸ್ವಾಮಿ ಉದ್ಘಾಟಿಸಿದರು. ವಸುದಾ ವಸತಿ ಗೃಹವನ್ನು ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ವರದಾ ವಸತಿ ಗೃಹವನ್ನು ದ.ಕ ಜಿಲ್ಲಾ ಧಾರ್ಮಿಕ ದತ್ತಿ ಇಲಾಖಾ ಸಹಾಯಕ ಆಯುಕ್ತೆ ಪ್ರಮೀಳಾ, ಆದಿಸುಬ್ರಹ್ಮಣ್ಯ ಉದ್ಯಾನವನವನ್ನು ತೂಗು ಸೇತುವೆ ಸರದಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಹಾಗೂ ಆದಿಸುಬ್ರಹ್ಮಣ್ಯ ಸೇತುವೆಯನ್ನು ಲೋಕೋಪಯೋಗಿ ಅಭಿಯಂತರ ಕಾಂತರಾಜ್ ಬಿ.ಟಿ ಉದ್ಘಾಟಿಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಪ್ರಸ್ತಾಪಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ವಂದಿಸಿ, ಉಪನ್ಯಾಸಕ ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು.

ಲೋಕೇಶ್ ಬಲ್ಲಡ್ಕ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English