ಗುಡಿಸಲು ಮುಕ್ತ ರಾಜ್ಯವನ್ನಾಗಿ ಪರಿವರ್ತಿಸಲು ಕ್ರಾಂತಿಕಾರಿ ಹೆಜ್ಜೆ : ಪಾಲೆಮಾರ್‌

11:02 AM, Tuesday, August 16th, 2011
Share
1 Star2 Stars3 Stars4 Stars5 Stars
(No Ratings Yet)
Loading...

Independence Day/ಸ್ವಾತಂತ್ರೋತ್ಸವ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನೆಹರೂ ಮೈದಾನದಲ್ಲಿ ಜರಗಿದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ರಾಜ್ಯ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೃಷ್ಣ ಜೆ. ಪಾಲೆಮಾರ್‌ ನೆರವೇರಿಸಿದರು. ತೆರೆದ ಜೀಪಿನಲ್ಲಿ ಪರೇಡ್‌ ವೀಕ್ಷಿಸಿದ ಅನಂತರ ಅವರು ಸ್ವಾತಂತ್ರೋತ್ಸವದ ಸಂದೇಶ ನೀಡಿದರು.

ಕಳೆದ ಮೂರು ವರ್ಷ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಮೂಲಕ ಒಟ್ಟು 1,712.06 ಕೋಟಿ ರೂ. ಮಿಕ್ಕಿದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಗ್ರಾಮೀಣ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 47.51 ಕೋಟಿ ರೂ. ಹಾಗೂ 2011- 12ನೇ ಸಾಲಿನ ಯೋಜನೆಗಳಿಗೆ 56.38 ಕೋಟಿ ರೂ. ಬಿಡುಗಡೆಮಾಡಲಾಗಿದೆ. ಬಂದರುಗಳ ಅಭಿವೃದ್ಧಿ ಉದ್ದೇಶದಿಂದ ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಮಳವೂರಿನಲ್ಲಿ ವೆಂಟೆಡ್‌ ಡ್ಯಾಂ ನಿರ್ಮಾಣಕ್ಕೆ 32 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.

Independence Day/ಸ್ವಾತಂತ್ರೋತ್ಸವ

ರಾಜ್ಯದ ರೈತರು, ಮೀನುಗಾರರು ಮತ್ತು ನೇಕಾರರಿಗೆ ಶೇ. 1 ಬಡ್ಡಿ ದರದಲ್ಲಿ ಸಾಲ, ಸಣ್ಣ ರೈತರ ಪ್ರತಿ ಕುಟುಂಬಗಳಿಗೆ ಒಣಭೂಮಿ ಅಭಿವೃದ್ಧಿಗೆ ಸಹಾಯಧನ, ಮೀನುಗಾರರಿಗೆ ನೀಡುವ ತೆರಿಗೆ ರಹಿತ ಡೀಸಿಲ್‌ ಪ್ರಮಾಣ 1 ಲಕ್ಷ ಲೀಟರಿಗೆ ಹೆಚ್ಚಳ, ಮತ್ಸಾ éಶ್ರಯ ಯೋಜನೆಯಡಿ ಪ್ರಕೃತ ಸಾಲಿನಲ್ಲಿ 60 ಸಾವಿರ ರೂ. ವೆಚ್ಚದ 2,000 ಮನೆಗಳು, ಅವರು ಬಳಸುವ ಮಂಜುಗಡ್ಡೆಗೆ ವ್ಯಾಟ್‌ ತೆರಿಗೆ ವಿನಾಯಿತಿ, ತಲಾ 10 ಲಕ್ಷ ರೂ. ವೆಚ್ಚದಲ್ಲಿ 50 ನೂತನ ಮೀನುಮಾರುಕಟ್ಟೆಗಳ ನಿರ್ಮಾಣ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆಯಡಿ ಅಂತಿಮ ಠೇವಣಿ 1 ಲಕ್ಷ ರೂ.ಗೆ ಏರಿಕೆ, ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದೆ ಎಂದು ವಿವರಿಸಿದರು.

ಮಂಗಳೂರು ಮಹಾನಗರ ಪಾಲಿಕತೆಯಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಲು ಮುಂಬಯಿಯ ಬಾಬಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌ ತಂತ್ರಜ್ಞಾನದ ಬಯೋಗ್ಯಾಸ್‌ ಸ್ಥಾವರವನ್ನು ಕಮಿಷನಿಂಗ್‌ ಮಾಡಲಾಗಿದೆ. ನಗರದ ನೈರ್ಮಲೀಕರಣ ಯೋಜನೆಯ ಕುರಿತಾಗಿ 14 ಸದಸ್ಯರನ್ನು ಒಳಗೊಂಡ ಸಿಟಿ ಸಾನಿಟೇಷನ್‌ ಟಾಸ್ಕ್ ಪೋರ್ಸ್‌ ಸಮಿತಿ ರಚಿಸಲಾಗಿದೆ ಎಂದರು.

ಬಸವ ವಸತಿ ಯೋಜನೆಯಡಿ ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2,000 ಮನೆ ನಿರ್ಮಾಣ ಗುರಿ ಹೊಂದಲಾಗಿದ್ದು, 9,648 ಫ‌ಲಾನುಭವಿಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ 70 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಒಟ್ಟು 233 ಎಕ್ರೆ ಜಮೀನು ಕಾದಿರಿಸಲಾಗಿದೆ. ವಾಜಪೇಯಿ ನಗರಾಶ್ರಯ ಯೋಜನೆಯಡಿ ಮಹಾನಗರ ಪಾಲಿಕೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ಈ ವರ್ಷ 2,600 ನಿವೇಶನಗಳು ಹಾಗೂ 1,325 ವಸತಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ‘ನಮ್ಮ ಮನೆ’ ಯೋಜನೆಯಡಿ ನಿವೇಶನ ಹೊಂದಿರುವ ಬಡ ಕುಟುಂಬಗಳಿಗೆ 50,000 ರೂ. ಸಹಾಯಧನದೊಂದಿಗೆ ಮನೆ ನಿರ್ಮಿಸಲು 1 ಲಕ್ಷ ರೂ. ತನಕ ಸಾಲ ನೀಡಲಾಗುವುದು. ಈ ಯೋಜನೆಯಡಿ ಜಿಲ್ಲೆಗೆ 7,300 ಮನೆ ನಿರ್ಮಾಣದ ಗುರಿ ಹೊಂದಿದ್ದು, ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆ ಇದಾಗಲಿದೆ ಎಂದರು.

ಏಥೆನ್ಸ್‌ನಲ್ಲಿ ಜರಗಿದ ವಿಶಿಷ್ಟ ಮಕ್ಕಳ ವಿಶ್ವ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಪಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಾದ ರಾಯ್‌ಸ್ಟನ್‌ ಪಿಂಟೋ, ಅನಿಲ್‌ ಮೆಂಡೋನ್ಸ ಮತ್ತು ಧನ್ಯಾ ಎಸ್‌. ರಾವ್‌ ಅವರನ್ನು ಸಚಿವರು ಸಮ್ಮಾನಿಸಿದರು.

ವಿಧಾನಸಭೆಯ ಉಪಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಮೇಯರ್‌ ಪ್ರವೀಣ್‌, ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್‌ ಕೆ.ಟಿ., ತಾ.ಪಂ. ಅಧ್ಯಕ್ಷೆ ಭವ್ಯಾ ಗಂಗಾಧರ ಪೂಜಾರಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌.ಬಿ. ಅಬೂಬಕ್ಕರ್‌, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಜಿಲ್ಲಾಧಿಕಾರಿ ಚನ್ನಪ್ಪ ಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್‌. ವಿಜಯ ಪ್ರಕಾಶ್‌, ಪಶ್ಚಿಮ ವಲಯ ಐಜಿಪಿ ಆಲೋಕ್‌ ಮೋಹನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಾಬೂರಾಮ್‌, ಪೊಲೀಸ್‌ ಕಮಿಶನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.

ಸ್ವಾತಂತ್ರೋತ್ಸವದ ಅಂಗವಾಗಿ ಆಕರ್ಷಕ ಕವಾಯತಿನ ದಂಡನಾಯಕರಾಗಿ ಪ್ರೊಬೆಷನರಿ ಡಿವೈಎಸ್ಪಿ ಯಶೋದಾ ಮತ್ತು ಉಪ ದಂಡನಾಯಕರಾಗಿ ಮೀಸಲು ಪೊಲೀಸ್‌ ಪಡೆಯ ಇನ್ಸ್‌ಪೆಕ್ಟರ್‌ ಎನ್‌. ಗುರುರಾಜ್‌ ಅವರು ಕಾರ್ಯನಿರ್ವಹಿಸಿದರು. ಮಾನವ ನಿಯಂತ್ರಿತ ಹೆಲಿಕಾಪ್ಟರ್ ಪ್ರದರ್ಶನ. ಐದು ಓವರುಗಳ ಕ್ರಿಕೆಟ್ ಪಂದ್ಯಾಟ ನಡೆಯಿತು.

ಮಂಜುಳಾ ಶೆಟ್ಟಿ ಹಾಗೂ ಉಮೇಶ್‌ ಕೆ.ಆರ್‌. ಕಾರ್ಯಕ್ರಮ ನಿರ್ವಹಿಸಿದರು.

Independence Day/ಸ್ವಾತಂತ್ರೋತ್ಸವ

Independence Day/ಸ್ವಾತಂತ್ರೋತ್ಸವ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English