ಮಂಗಳೂರು : ಖಾಸಗಿ ಸಹಭಾಗಿತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಚ್‌ಪಿಸಿಎಲ್ ಸಹಯೋಗದೊಂದಿಗೆ ನಿರ್ಮಾಣಗೊಂಡ ಐದು ಇ-ಟಾಯ್ಲೆಟ್‌ಗಳು ಇಂದು ಲೋಕಾರ್ಪಣೆಗೊಂಡವು.
ನಗರದ ಲಾಲ್‌ಬಾಗ್ ಬಸ್ ನಿಲ್ದಾಣ ಬಳಿ ಶಾಸಕ ಜೆ.ಆರ್.ಲೋಬೊ ಇ-ಟಾಯ್ಲೆಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಇದೇ ಮಾದರಿಯ ಇನ್ನಷ್ಟು ಟಾಯ್ಲೆಟ್‌ಗಳು ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದರು.
ಸುಮಾರು ಆರೂವರೆ ಲಕ್ಷ ರೂ. ವೆಚ್ಚದಲ್ಲಿ ಇ-ಟಾಯ್ಲೆಟ್ ನಿರ್ಮಿಸಲಾಗಿದೆ . ಈ ಪೈಕಿ ಲಾಲ್‌ಭಾಗ್‌ನಲ್ಲಿ 2, ಕದ್ರಿಯಲ್ಲಿ 2 ಮತ್ತು ಹಂಪನಕಟ್ಟೆಯ ಬಳಿ ಒಂದು ಟಾಯ್ಲೆಟನ್ನು ಸಾರ್ವಜನಿಕ ಸೇವೆಗೆ ಬಳಸಲು ಇಂದು ಉದ್ಘಾಟಿಸಲಾಯಿತು ಎಂದವರು ತಿಳಿಸಿದರು.
ಮನಪಾ ಮೇಯರ್ ಕವಿತಾ ಸನಿಲ್ ಮಾತನಾಡಿ, ನಗರದಲ್ಲಿ ಇನ್ನೂ ಕೆಲವು ಕಂಪೆನಿಗಳು ಈ ರೀತಿಯ ಟಾಯ್ಲೆಟ್‌ಗಳ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿವೆ ಎಂದು ತಿಳಿಸಿದರು.
ತಿರುವನಂತಪುರದ ಇರಂ ಸೈಂಟಿಫಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಕುಮಾರ್ ಮಾತನಾಡಿ, ಇರಂ ಸೈಂಟಿಫಿಕ್ ಪ್ರೈ.ಲಿ. ಮೂಲಕ ನಿರ್ಮಾಣಗೊಂಡಿರುವ ಈ ಇ-ಟಾಯ್ಲೆಟ್‌ಗಳು ಡಿಜಿಟಲ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜನರು 1 ರೂ., 2 ರೂ., 5 ರೂ. ನಾಣ್ಯಗಳನ್ನು ಬಳಸಿ ಟಾಯ್ಲೆಟನ್ನು ಬಳಸಬಹುದು. ಈ ಟಾಯ್ಲೆಟ್‌ನಲ್ಲಿ ಕನಿಷ್ಠ ನೀರಿನ ಬಳಕೆ, ನಿಗದಿಪಡಿಸಿದ ಸಮಯ ಹಾಗೂ ಸಮರ್ಪಕವಾದ ನಿರ್ವಹಣೆ ಇರುತ್ತದೆ ಎಂದವರು ತಿಳಿಸಿದರು.
ದೇಶದ 19 ರಾಜ್ಯಗಳಲ್ಲಿ ಈ ರೀತಿಯ ಟಾಯ್ಲೆಟ್‌ನ್ನು ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ 232 ಟಾಯ್ಲೆಟ್ ನಿರ್ಮಿಸಲಾಗಿದೆ. ಕಂಪೆನಿ ಒಂದು ವರ್ಷ ಈ ಟಾಯ್ಲೆಟನ್ನು ಉಚಿತವಾಗಿ ನಿರ್ವಹಣೆ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಮನಪಾ ಉಪ ಮೇಯರ್ ರಜನೀಶ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ಸದಸ್ಯರಾದ ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕತ್, ಹೇಮಲತಾ ಆರ್. ಸಾಲ್ಯಾನ್, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English