ಮಂಗಳೂರು : ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಹಿಂದೆ ಎಸ್.ಡಿ.ಪಿ.ಐ ಕಾರ್ಯಕರ್ತರ ಕೈವಾಡವಿದೆ, ಅದರ ಮುಖಂಡರನ್ನು ಬಂಧಿಸಿದಲ್ಲಿ ಪ್ರಕರಣದ ಹಿಂದೆ ಇರುವ ಆರೋಪಿಗಳು ಹೊರ ಬರಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಹೇಳಿದ್ದಾರೆ.
ಎಸ್ ಡಿಪಿಐ ಮುಖಂಡ ಅಶ್ರಫ್ ಕೊಲೆ ಪ್ರಕರಣವನ್ನು 48 ಗಂಟೆಗಳಲ್ಲಿ ಭೇದಿಸಿದ ಪೊಲೀಸರಿಗೆ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆ ನಡೆದ 7 ದಿನಗಳು ಕಳೆದರೂ ಕೊಲೆಗಡುಕರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ” ಎಂದು ದೂರಿದರು.
ಶುಕ್ರವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಿಂದೂ ಸಂಘಟನೆಯ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಪೊಲೀಸರು ಬಂಧನಕ್ಕೆ ಮುಂದಾಗುತ್ತಿದ್ದಾರೆ. ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಕುಟುಂಬಸ್ಥರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ” ಎಂದು ಆರೋಪಿಸಿದರು.
ಎಡಿಜಿಪಿ ಅಲೋಕ್ ಮೋಹನ್ ಪೊಲೀಸರು ದಾಳಿ ನಡೆಸುವುದನ್ನು ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಮುಂದಿನ ಅನಾಹುತಗಳಿಗೆ ರಾಜ್ಯ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು.
ರಾಜ್ಯ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ತುಷ್ಠೀಕರಣದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ ಮತಾಂಧರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಕಿಡಿಕಾರಿದ ಅವರು ಪೊಲೀಸ್ ಅಧಿಕಾರಿಗಳ ಮೇಲೆ ಅನಾವಶ್ಯಕ ಒತ್ತಡ ಹೇರಿ ಪಕ್ಷಪಾತ ಧೋರಣೆಗೆ ಕಾರಣರಾಗುತ್ತಿರುವ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರನ್ನು ವಾಪಾಸ್ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಮುಖಂಡರಾದ ಭುಜಂಗ ಕುಲಾಲ್ ಮತ್ತು ಗೋಪಾಲ್ ಕುತ್ತಾರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English