ಮಂಗಳೂರು : ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಪ. ಜಾತಿ ವಿಭಾಗದ ಸಭೆ ಪ. ಜಾತಿ ಘಟಕದ ರಾಜ್ಯಾಧ್ಯಕ್ಷ ಎನ್. ಮಂಜುನಾಥ್ ನೇತೃತ್ವದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್ ರಾಜ್ಯ ಸರಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ಒಂದೇ ಒಂದು ಎಸ್‌ಸಿ/ಎಸ್‌ಟಿ ಜಾಗೃತಿ ಉಸ್ತುವಾರಿ ಸಮಿತಿಯ ಸಭೆ ನಡೆದಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಪರಿಶಿಷ್ಟ ಜಾತಿ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು 4,500 ಮಂದಿ ಸರಕಾರಿ ನೌಕರಿಗೆ ಸೇರಿದ್ದಾರೆ. ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ 18 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಗೊಳಿಸಿದ್ದರು. ಪ್ರಸ್ತುತ ಸರಕಾರ 2 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳದೇ ಇರುವುದು ದಲಿತ ವಿರೋಧಿ ನೀತಿಗೆ ಸ್ಪಷ್ಟ ನಿದರ್ಶನ ಎಂದರು.
ಜಿಲ್ಲಾ ಮಟ್ಟದಲ್ಲಿ ನಡೆಯುವ ದಲಿತರ ಕುಂದು ಕೊರತೆಗಳ ಸಭೆಯ ವರದಿ ರಾಜ್ಯಕ್ಕೆ ಹೋಗುತ್ತದೆ. ನೂತನ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರು ವರದಿಯನ್ನು ಪರಿಶೀಲಿಸಿ ಕುಂದು ಕೊರತೆಗಳ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ ಸವಲತ್ತುಗಳನ್ನು ಒದಗಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರಕಾರಿ ನೌಕರಿ ಪಡೆದವರನ್ನು ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಲ್ಪಿಸುವ ಹೊಣೆಗಾರಿಕೆ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರದ್ದಾಗಿದೆ ಎಂದರು.
ಜಿಲ್ಲೆಯಲ್ಲಿ ನಡೆದ ದಲಿತ ಮುಖಂಡರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ದರ್ಖಾಸು ಜಾಗದ ಬಗೆಗಿನ ಮಿತಿಯನ್ನು ತೆಗೆದು ಹಾಕಬೇಕು. ಡಿ.ಸಿ. ಮನ್ನಾ ಭೂಮಿಯನ್ನು ನಗರ ಹಾಗೂ ಪಟ್ಟಣ ಪಂಚಾಯತ್‌ನ ವ್ಯಾಪ್ತಿಗೆ ನೀಡಬಾರದು ಎಂಬ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರುಗಳಾದ ಯು. ಟಿ. ಖಾದರ್, ಪಿ. ವಿ. ಮೋಹನ್, ಐವನ್ ಡಿ’ಸೋಜ, ಇಬ್ರಾಹಿಂ ಕೋಡಿಜಾಲ್, ಪದ್ಮನಾಭ ನರಿಂಗಾನ, ಡಾ| ರಘು, ಟಿ. ಕೆ. ಸುಧೀರ್ ಮುಂತಾದವರು ಉಪಸ್ಥಿತರಿದ್ದರು
Click this button or press Ctrl+G to toggle between Kannada and English