ಸುರೇಂದ್ರ ಕುಲಾಲ್ ನಿಗೂಢ ಸಾವಿನ ಪ್ರಕರಣ-ಆರೋಪಿಗಳ ಜಾಮೀನು ಅರ್ಜಿ ವಜಾ

1:36 PM, Saturday, July 29th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

surendra Kulalಉಡುಪಿ: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೋಳ ಎಂಬಲ್ಲಿ ನಿಗೂಢ ಸಾವಿಗೀಡಾಗಿರುವ ಸುರೇಂದ್ರ ಕುಲಾಲ್(28) ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿನ್ನೆ ತಿರಸ್ಕೃತಗೊಂಡಿದೆ. ಆರೋಪಿಗಳು ಸುರೇಂದ್ರ ಕುಲಾಲ್‌ನನ್ನು ಕೊಲೆಗೈದಿರುವ ಶಂಕೆಯಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಎಂದು ಸರಕಾರಿ ಅಭಿಯೋಜಕಿ ಶಾಂತಿಬಾಯಿ ಅವರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗಳಾದ ಜೀತು ಸಫಲಿಗ, ಮಹೇಶ್ ಇನ್ನಾ, ರಾಜೇಶ್ ಯಾನೆ ಚಲ್ಪ ಹಾಗೂ ವರಪ್ರಸಾದ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜುಲೈ 2ರಂದು ಆರೋಪಿಗಳು ಸುರೇಂದ್ರ ಕುಲಾಲ್‌ರನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಮುಖ ಆರೋಪಿಗಳಾದ ಜೀತು ಮತ್ತು ಮಹೇಶ್ ಅವರೇ ಫೋನ್ ಕರೆ ಮಾಡಿ ಹೇಳಿಕೊಂಡಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಆರೋಪಿಗಳ ಹೆಸರು ಕೊಟ್ಟು ವಿಚಾರಣೆ ನಡೆಸುವಂತೆ ಕೇಳಿಕೊಂಡಿದ್ದರೂ ಪೊಲೀಸರು ಯಾವುದೇ ರೀತಿಯಲ್ಲಿ ಕ್ರಮ ಜರುಗಿಸಿರಲಿಲ್ಲ ಎನ್ನಲಾಗಿದೆ. ನಾಪತ್ತೆಯಾಗಿದ್ದ ಸುರೇಂದ್ರ ಕುಲಾಲ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಜುಲೈ 9ರ ಮುಂಜಾನೆ ಪತ್ತೆಯಾಗಿತ್ತು. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಅಪಹರಣ, ಕೊಲೆಯತ್ನ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ರೋಷನ್ ಎಂಬಾತ ಹಲ್ಲೆಗೈದ ಮರುದಿನ ವಿದೇಶಕ್ಕೆ ತೆರಳಿದ್ದ ಎಂದು ಹೇಳಲಾಗಿತ್ತು. ಆದರೆ ಪೊಲೀಸರು ಆತನ ಹೆಸರನ್ನು ಕೈಬಿಟ್ಟು ನಾಲ್ವರು ಆರೋಪಿಗಳ ಹೆಸರನ್ನು ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದರು ಎಂದು ಮನೆಮಂದಿ ಆರೋಪಿಸಿದ್ದರು.

ಸುರೇಂದ್ರ ಕುಲಾಲ್ ಪ್ರಕರಣದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳ ಪರವಹಿಸಿ ನಿಂತಿದ್ದಾರೆ. ಆರೋಪಿಗಳನ್ನು ಘಟನಾಸ್ಥಳ ತೋರಿಸಲು ಕರೆಯದೆ ನಮ್ಮನ್ನೇ ತೋರಿಸುವಂತೆ ಹೇಳಿದ್ದಲ್ಲದ್ ಇದೇ ಸ್ಥಳವೆಂದು ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ, ಮಾತ್ರವಲ್ಲದೆ ದೂರು ನೀಡಲು ತೆರಳಿದಾಗ ನಮ್ಮನ್ನೇ ಆರೋಪಿಗಳಂತೆ ನಿಂದಿಸಿದ್ದಾರೆ ಎಂದು ಉಡುಪಿ ಎಸ್ಪಿಯವರಿಗೆ ಮೃತ ಸುರೇಂದ್ರ ಕುಲಾಲ್ ತಾಯಿ ರತ್ನ ಮನವಿ ಸಲ್ಲಿಸಿದ್ದರು. ಸುರೇಂದ್ರ ಕುಲಾಲ್‌ನನ್ನು ಕೊಲೆ ಮಾಡಲಾಗಿದೆ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು, ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ, ಗೃಹಮಂತ್ರಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮೃತನ ತಾಯಿ ಮನವಿ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English