ಮಂಗಳೂರು : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಗೂಢ ಸಾವಿನ ಹಿನ್ನಲೆಯಲ್ಲಿ ಹುಟ್ಟಿಕೊಂಡಿರುವ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿಯು ಆ.9ರಂದು ಮಂಗಳೂರಿನಲ್ಲಿ ಧರಣಿ ನಡೆಸಲು ನಿರ್ಧರಿಸಿದೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಮುಖಂಡ, ನ್ಯಾಯವಾದಿ ದಿನಕರ ಶೆಟ್ಟಿ, ವಿದ್ಯಾರ್ಥಿ ಸಂಘಟನೆಗಳು, ಸಂಘ ಸಂಸ್ಥೆಗಳ ಜೊತೆಗೂಡಿ ಆ.9ರಂದು ಹೋರಾಟ ತೀವ್ರಗೊಳಿಸಲಾಗುವುದು. ಅಂದು ಬೆಳಗ್ಗೆ 10ಕ್ಕೆ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಮತ್ತು ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ದಿನಕರ ಶೆಟ್ಟಿ ನುಡಿದರು.
ಕಾವ್ಯಾ ಪೂಜಾರಿಯ ನಿಗೂಢ ಮರಣದ ಹಿನ್ನಲೆ ಬಯಲಿಗೆ ಬರಬೇಕು, ಅದಕ್ಕಾಗಿ ನಿಷ್ಪಕ್ಪಪಾತ ತನಿಖೆ ನಡೆಸಬೇಕು, ಆಕೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕಲ್ಪಿಸಬೇಕು ಎಂದು ಅವರು ವಿನಂತಿಸಿದರು.
ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಮೂಡುಬಿದಿರೆ ಇನ್‌ಸ್ಪೆಕ್ಟರ್ ಪಾತ್ರ ಇದೆ. ತನಿಖಾ ತಂಡದ ನೇತೃತ್ವ ವಹಿಸಿರುವ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಜೊತೆ ಈ ಇನ್‌ಸ್ಪೆಕ್ಟರ್ ಬುಧವಾರ ಕಾವ್ಯಾಳ ಮನೆಗೆ ಭೇಟಿ ನೀಡಿ ಆಕೆಯ ತಾಯಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಸಂದರ್ಭ ಕಾವ್ಯಾಳ ತಾಯಿ ಅಸ್ವಸ್ಥಗೊಂಡಿದ್ದಾರೆ. ಪ್ರಕರಣದ ಸಂಶಯಿತ ಅಧಿಕಾರಿಯೇ ವಿಚಾರಣೆಗೊಳಪಡಿಸುವುದು ಖಂಡನೀಯ. ಈ ಬಗ್ಗೆ ಪೊಲೀಸ್ ಇಲಾಖೆ ಸ್ಷಷ್ಟಣೆ ನೀಡಬೇಕು ಎಂದು ರಾಬರ್ಟ್ ರೊಝಾರಿಯೊ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಷ್ಣುಮೂರ್ತಿ, ಬಿ.ಎಂ.ಪಿಂಟೋ, ಅನಿಲದಾಸ್, ಕಿಶೋರ್ ಬಾಬು, ಮುಹಮ್ಮದ ಹಾಶಿಮ್, ರಘುವೀರ್ ಸೂಟರ್‌ಪೇಟೆ, ಪ್ರವೀಣ್ ಬಂಗೇರಾ, ಮಧುಸೂದನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English