ಮಂಗಳೂರು : ವಕೀಲರ ಸಂಘದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಅಣ್ಣಾ ಹಜಾರೆ ಆರಂಭಿಸಿರುವ ಹೋರಾಟವನ್ನು ಬೆಂಬಲಿಸಿ ವಕೀಲರ ಸಂಘದ ವತಿಯಿಂದ ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೌನ ಮೆರವಣಿಗೆ ಮತ್ತು ಬಳಿಕ ಪ್ರತಿಭಟನಾ ಸಭೆ ಜರಗಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಿರುವ ಲೋಕ ಪಾಲ ಮಸೂದೆಯಿಂದ ಎಲ್ಲಾ ಭ್ರಷ್ಟರನ್ನು ಶಿಕ್ಷಿಸಲು ಸಾಧ್ಯವಾಗದು. ಪ್ರಧಾನಿ ಮತ್ತು ಉನ್ನತ ನ್ಯಾಯಾಂಗದ ಸಹಿತ ಎಲ್ಲರೂ ಲೋಕ ಪಾಲ ಮಸೂದೆಯ ವ್ಯಾಪ್ತಿಗೆ ಬರಬೇಕು. ಈ ದಿಶೆಯಲ್ಲಿ ಅಣ್ಣಾ ಹಜಾರೆ ಆರಂಭಿಸಿರುವ ಹೋರಾಟವನ್ನು ಸಮಾಜದ ಎಲ್ಲರೂ ಬೆಂಬಲಿಸ ಬೇಕಾಗಿದೆ ಎಂದು ಅವರು ಹೇಳಿದರು.
1968 ರಿಂದ 9 ಬಾರಿ ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಮಂಡನೆಯಾಗಿದೆ. ಅದು ಇದುವರೆಗೆ ಜಾರಿಯಾಗಿಲ್ಲ. ನಾವು ನಡೆಸುತ್ತಿರುವ ಪ್ರತಿಭಟನೆ ಯಾವುದೇ ಒಂದು ರಾಜಕೀಯ ಪಕ್ಷ ಅಥವಾ ಒಂದು ಸರಕಾರ ವಿರುದ್ಧ ಅಲ್ಲ; ದೇಶವನ್ನು ಆಳಿದ ಎಲ್ಲಾ ಸರಕಾರಗಳ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳ ವಿರುದ್ಧವಾಗಿದೆ ಎಂದು ಎಸ್.ಪಿ. ಚೆಂಗಪ್ಪ ವಿವರಿಸಿದರು.
ಇದುವರೆಗೆ ಎಲ್ಲಾ ಜನಪರ ಹೋರಾಟಗಳನ್ನು ಮಂಗಳೂರು ವಕೀಲರ ಸಂಘ ಬೆಂಬಲಿಸುತ್ತಾ ಬಂದಿದೆ. ಅದರಂತೆ ಈಗ ಬಲಿಷ್ಟ ಲೋಕಪಾಲ ಮಸೂದೆ ಜಾರಿಗೊಳಿಸಲು ಕೇಂದ್ರ ಸರಕಾರವನ್ನು ಮತ್ತು ಜನ ಪ್ರತಿನಿಧಿಗಳನ್ನು ಆಗ್ರಹಿಸಿ ಹಾಗೂ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಗಣೇಶ್ ಶೆಣೈ, ಜತೆ ಕಾರ್ಯದರ್ಶಿ ಶ್ರೀದೇವಿ, ಉಪಾಧ್ಯಕ್ಷ ನರಸಿಂಹ ಹೆಗ್ಡೆ, ಕೋಶಾಧಿಕಾರಿ ವಿಠಲ ರೈ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English