ಮಂಗಳೂರು : ದ.ಕ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಸರಕಾರದ ವತಿಯಿಂದ ಶ್ರೀಕೃಷ್ಣ ಜಯಂತಿ ಆಚರಣೆಯನ್ನು ನಗರ ಪುರಭವನದ ಮಿನಿ ಸಭಾಂಗಣದಲ್ಲಿ ಆಚರಿಸಲಾಯಿತು.
ಉದ್ಘಾಟನೆ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಯಾದವ ಸಮುದಾಯದಲ್ಲಿ ಹುಟ್ಟಿ ಜಗತ್ತಿಗೆ ಗೀತೆಯ ಮೂಲಕ ಸಂದೇಶ ನೀಡಿರುವ ಶ್ರೀ ಕೃಷ್ಣ ಸಾಮಾಜಿಕ ನ್ಯಾಯದ ಸಂಕೇತ ಎಂದು ಅಭಿಪ್ರಾಯಿಸಿದ್ದಾರೆ.
ಶೋಷಣೆ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಎಲ್ಲರೂ ಭಾಷಣ ಮಾಡುತ್ತಾರೆ. ಆದರೆ, ಅನುಷ್ಠಾನಕ್ಕೆ ಹಿಂಜರಿಯುತ್ತಾರೆ, ಶ್ರೀಕೃಷ್ಣನ ಗೀತೋಪದೇಶ ಅರ್ಥ ಮಾಡಿಕೊಂಡರೆ ವರ್ತಮಾನ ಕಾಲದ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ ಎಂದವರು ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ಶ್ರೀಕೃಷ್ಣನ ಸಂದೇಶವನ್ನು ತಿಳಿಸಲು ಸರಕಾರಿ ಮಟ್ಟದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ, ಉಪನ್ಯಾಸ ಏರ್ಪಡಿಸಲಾಗುತ್ತಿದೆ. ಈ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ, ಸಾಮರಸ್ಯ ಸಾಧ್ಯ ಎಂದವರು ಹೇಳಿದರು.
ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕವಿತಾ ಸನಿಲ್, ತುಳು ಸಾಹಿತ್ಯ ಅಕಾಡೆಮಿ ನಿಯೋಜಿತ ಅಧ್ಯಕ್ಷ ಎ.ಸಿ.ಭಂಡಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ತಾಲೂಕು ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮನಪಾ ಕಮೀಷನರ್ ಮುಹಮ್ಮದ್ ನಝೀರ್, ಗೊಲ್ಲ ಯಾದವ ಸಮಾಜ ಸೇವಾ ಸಂಘದ ಮಧುಸೂದನ ಮತ್ತು ಇ.ಎಸ್.ವಾಸುದೇವ ಉಪಸ್ಥಿತರಿದ್ದರು. ಪ್ರಾಧ್ಯಾಪಕ ವಾಸುದೇವ ಬೆಳ್ಳೆ ಶ್ರೀಕೃಷ್ಣ ಸಂದೇಶ ಕುರಿತು ಉಪನ್ಯಾಸ ನೀಡಿದರು.
ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English