ಮಂಗಳೂರು : ಆರ್‌ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ 43 ದಿನಗಳ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಜಿಪ ಮುನ್ನೂರು ಗ್ರಾಮದ ಹಾಲಾಡಿ ನಿವಾಸಿ ಅಬ್ದುಲ್ ಶಾಫಿ (36), ಚಾಮರಾಜ ನಗರದ ಗಾಳಿಪುರ ಗ್ರಾಮದ ಖಲೀಲುಲ್ಲಾ (30) ಎಂದು ಗುರುತಿಸಲಾಗಿದೆ.
ಸಜಿಪಮೂಡ ಗ್ರಾಮದ ಕಂದೂರು ನಿವಾಸಿಯಾಗಿದ್ದ ಶರತ್ ಮಡಿವಾಳ ಮೇಲೆ ಜು.4ರಂದು ಮಾರಣಾಂತಿಕ ದಾಳಿ ನಡೆದಿತ್ತು. ಅಂದು ರಾತ್ರಿ ಸುಮಾರು 10 ಗಂಟೆ ಹೊತ್ತಿಗೆ ಬಿ.ಸಿ.ರೋಡ್‌ನಲ್ಲಿರುವ ಉದಯ ಲಾಂಡ್ರಿಯಲ್ಲಿದ್ದ ವೇಳೆ ಶರತ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಬಳಿಕ ತೀವ್ರ ಗಾಯಗೊಂಡಿದ್ದ ಶರತ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಳಿಕ ಶರತ್ ಅಂತ್ಯ ಸಂಸ್ಕಾರ ಯಾತ್ರೆ ವೇಳೆ ಕಲ್ಲು ತೂರಾಟ ಸಹ ನಡೆದಿತ್ತು. ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಇದೀಗ ಬಂಧಿಸಿರುವ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ ಪ್ರಕರಣದಲ್ಲಿ ಇನ್ನುಳಿದ ಅರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.
‘ಕಲಾಯಿ ಅಶ್ರಫ್’ ಹತ್ಯೆಗೆ ಪ್ರತೀಕಾರವಾಗಿ ಶರತ್ ಮಡಿವಾಳರವರನ್ನು ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
Click this button or press Ctrl+G to toggle between Kannada and English