ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ನೆಹರೂ ಮೈದಾನದಲ್ಲಿ 71ನೇ ಸ್ವಾತಂತ್ರ್ಯೋತ್ಸವದಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನು ಅತ್ಯಂತ ಗೌರವದೊಂದಿಗೆ ಸ್ಮರಿಸುವುದರ ಜೊತೆಗ ಅವರ ಜೀವನ ಆದರ್ಶ ಮತ್ತು ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯ ದಿನಾಚರಣೆಯ ಈ ಸಂಭ್ರಮದಲ್ಲಿ ದೇಶದ ಐಕ್ಯತೆ ಮತ್ತು ಪ್ರಗತಿಗೆ ಮಾರಕವಾದ ದುಷ್ಟ ಶಕ್ತಿಗಳನ್ನು ಎದುರಿಸಲು ದೃಢ ಸಂಕಲ್ಪಮಾಡಬೇಕು. ದೇಶದ ಗಡಿ ಕಾಯವ ವೀರ ಸೇನಾನಿಗಳನ್ನು ನೆನಪಿಸುವುದರೊಂದಿಗೆ ಜಾತಿ, ಮತ ಬೇಧಗಳನ್ನು ಮರೆತು ಸರ್ವರನ್ನು ಪ್ರೀತಿಸಬೇಕು ಎಂದರು.
ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ನಮ್ಮಲ್ಲಿ ಮೂಡಬೇಡಬೇಕಾಗಿದೆ, ಜಾತಿ ಮತ ಭೇದಗಳನ್ನು ಮರೆತು ಸರ್ವಧರ್ಮಗಳನ್ನು ಪ್ರೀತಿಸುವ ಮೂಲಕ ದೇಶದ ಭವ್ಯ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಸ್ನೇಹ ಹಾಗೂ ಸೌಹಾರ್ದತೆಯಿಂದ ದೇಶದ ಐಕ್ಯತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ. ಮುಂದಿನ ಪೀಳಿಗೆಯಲ್ಲೂ ಈ ಭಾವನೆಯನ್ನು ಮೂಡಿಸುವ ಪ್ರಯತ್ನ ನಿರಂತರ ಮಾಡಬೇಕಾಗಿದೆ ಎಂದರು.
ಭಾರತವು ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲದ ಸಿರಿವಂತಿಕೆಯಿಂದ ಜಾಗತಿಕ ನಕ್ಷೆಯಲ್ಲಿ ಮಹತ್ವದ ಸ್ಥಾನ ಗಳಿಸಿದೆ. ಮಾಹಿತಿ ತಂತ್ರಜ್ಞಾನದ ಸಾಧನೆ, ಪ್ರಪಂಚದ ಗಮನ ಸೆಳೆದಿದೆ. ಈ ಸಾಧನೆಯ ಹಿನ್ನೆಲೆಯನ್ನು ಗಮನದಲ್ಲಿರಿಸಿಕೊಂಡು ದೇಶದ ಏಳಿಗೆಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್. ಲೋಬೊ. ಮೊಯ್ದಿನ್ ಬಾವ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಲ್ಲಾ ಎಸ್ಪಿ ಸಿ.ಎಚ್. ಸುಧೀರ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಪತ್ರಕರ್ತರಿಗೆ ರಾಜೀವ್‌ಗಾಂಧಿ ಆರೋಗ್ಯ ಭಾಗ್ಯ ಯೋಜನೆ ಕಾರ್ಡ್ ಹಾಗೂ 2017ರ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸರ್ಕಾರಿ ಶಾಲೆಗಳ ಹತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆಯಡಿಲ್ಲಿ ಮೂವರು ಜೀವರಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುತ್ತೂರು ನಗರ ಸಭೆ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗಳಿಗೆ ಬಯಲು ಶೌಚ ಮುಕ್ತ ಪ್ರಶಸ್ತಿ ನೀಡಲಾಯಿತು.
ವಿಶೇಷ ಪೊಲೀಸ್ ಗಾಯನ ಹಾಗೂ ವಾದ್ಯ ವೃಂದದೊಂದಿಗೆ 21 ತುಕಡಿಗಳ ಪಥಸಂಚಲ ನಡೆಯಿತು. ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
Click this button or press Ctrl+G to toggle between Kannada and English