ಮಂಗಳೂರು : ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್‌ಗೆ ಬೆಂಗಳೂರಿನಲ್ಲಿ ಚಾಲನೆ ನೀಡುತ್ತಿದ್ದಂತೆಯೇ. ದ.ಕ.ಜಿಲ್ಲೆಯಲ್ಲೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಒತ್ತಾಯಿಸಿ ಡಿವೈಎಫ್ ಐ ನೇತೃತ್ವದಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಧರಣಿ ನಡೆಯಿತು.
ಈ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಣುಕು ಇಂದಿರಾ ಕ್ಯಾಂಟೀನ್ ಪ್ರದರ್ಶನ ನಡೆಯಿತು. ಸಾರ್ವಜನಿಕರು ರೂ. 5 ಕ್ಕೆ ಚಾ, ತಿಂಡಿ ತಿಂದು ಹಸಿವು ನೀಗಿಸಿ ಕೊಂಡರು.
ಖಾಸಗಿ ಹೋಟೆಲ್, ಉಪಹಾರ ಗೃಹಗಳಲ್ಲಿ ಬೆಲೆ ಏರಿಕೆ ನಿಯಂತ್ರಿಸಲು, ಮಂಗಳೂರಿಗೆ ಇಂದಿರಾ ಕ್ಯಾಂಟೀನ್ ಬರಬೇಕೆಂದು ಒತ್ತಾಯಿಸಲಾಯಿತು. ಒಂದೇ ಶ್ರೇಣಿಯ ಹೋಟೆಲ್ ಗಳಲ್ಲಿ ಒಂದೇ ರೀತಿಯ ದರವಿರಬೇಕು, ರೆಗ್ಯುಲೇಟಿಂಗ್ ಆ್ಯಕ್ಟ್ ಸಮಿತಿ ಪ್ರಾರಂಭಿಸಲು ಜಿಲ್ಲಾಡಳಿತ ಮುಂದಾಗ ಬೇಕು ಹಾಗೂ ಕೇರಳದ ಮಾವೇಲಿ ರೀತಿಯ ಹೋಟೆಲ್ ಪ್ರಾರಂಭಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟಿನ್ ಪ್ರಾರಂಭಿಸುತ್ತಿರುವುದು ಶ್ಲಾಘನೀಯ. ಬೆಂಗಳೂರಿನಲ್ಲಿ ಮಾತ್ರ ಅಲ್ಲ ಮಂಗಳೂರಿನಲ್ಲೂ ಇಂದಿರಾ ಕ್ಯಾಂಟೀನ್ ತೆರೆಯಬೇಕು, ಹೋಟೆಲ್ ಗಳಲ್ಲಿ ತಿಂಡಿಯ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೋಟೆಲ್ ಮಾಲಕರನ್ನು ಯಾರೂ ಕೇಳುವವರಿಲ್ಲ, ಜನರ ಹಗಲು ದರೋಡೆಯಾಗುತ್ತಿದೆ. ಹೋಟೆಲ್ ಬೆಲೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಕೂಡಾ ಮುಂದಾಗುತ್ತಿಲ್ಲ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ತಿಳಿಸಿದರು.
Click this button or press Ctrl+G to toggle between Kannada and English