ಈ ವರ್ಷದ ಅಂತ್ಯದೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ‘94 ಸಿ ಮತ್ತು 94 ಸಿಸಿ’ಯಡಿ ಹಕ್ಕುಪತ್ರ : ಕಾಗೋಡು

7:10 PM, Thursday, September 14th, 2017
Share
1 Star2 Stars3 Stars4 Stars5 Stars
(No Ratings Yet)
Loading...

Kagoduಮಂಗಳೂರು :  ವಾಸಿಸುವವನೇ ಆ ನೆಲದೊಡೆಯನಾಗಬೇಕು ಎಂಬ ಕನಸು ಕಂಡ ಫಲಾನುಭವಿಗಳಿಗೆ ನೆಲದ ಒಡೆತನ ನೀಡಿದ ಹೆಮ್ಮೆ ಕಾಂಗ್ರೆಸ್ ಸರಕಾರಕ್ಕೆ ಇದೆ, ಭೂಮಿ ನಿಮ್ಮ ಬೆನ್ನು ಹತ್ತಿ ಬರಲಾರದು. ನೀವೇ ಭೂಮಿಯನ್ನು ಬೆನ್ನು ಹತ್ತಿ ಹೋಗಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಮುಡಿಪು ಸಮೀಪದ ಕುರ್ನಾಡು ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ‘ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94 ಸಿಸಿ ಹಕ್ಕುಪತ್ರ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೊಟ್ಟ ಮಾತು-ದಿಟ್ಟ ಹೆಜ್ಜೆ- ನುಡಿದಂತೆ ನಡೆಯುತ್ತಿದ್ದೇವೆ’ ಎಂಬ ಘೋಷಣೆಯಡಿ  ನಡೆಯುವ ಕಾರ್ಯಕ್ರಮದಲ್ಲಿ ಈ ವರ್ಷದ ಅಂತ್ಯದೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ‘94 ಸಿ ಮತ್ತು 94 ಸಿಸಿ’ಯಡಿ ಹಕ್ಕುಪತ್ರ ವಿತರಿಸಲಾಗುವುದು. ಈಗಾಗಲೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದಿರಬಹುದು. ಆದರೆ ಕಾರಣಾಂತರದಿಂದ ಅರ್ಜಿ ಸಲ್ಲಿಸಲು ಬಾಕಿಯಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಹೆಜ್ಜೆಯ ಫಲವಾಗಿ ಇಂದು ಲಕ್ಷಾಂತರ ಮಂದಿ ನೆಲದ ಒಡೆಯರಾಗುತ್ತಿದ್ದಾರೆ. ಇಂತಹ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಸರಕಾರಕ್ಕಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್ ಯಾವತ್ತೂ ಕಾಂಗ್ರೆಸ್ ಸರಕಾರ ಪಕ್ಷ, ಜಾತಿ, ಮತ, ಬಡವ-ಬಲ್ಲಿದ ಎಂಬ ಭೇದ ಮಾಡಿಲ್ಲ. ಅರ್ಹರಿಗೆ ಯೋಜನೆಗಳನ್ನು ತಲುಪಿಸಿದೆ.  ಮನೆ ಇಲ್ಲದವರಿಗೆ ಮನೆ, ನಿವೇಶನ ಇಲ್ಲದವರಿಗೆ ನಿವೇಶನ ಹಂಚಿದೆ. ಇದಕ್ಕೆ ಅನುದಾನ ಬೇಕಾಗಿಲ್ಲ. ಕೇವಲ ಮನಸ್ಸು ಮಾತ್ರ ಬೇಕಾಗಿತ್ತು ಎಂದು ಹೇಳಿದರು.

‘94 ಸಿ ಮತ್ತು 94 ಸಿಸಿ’ ಯೋಜನೆಯಡಿ ಮನೆ ಕಟ್ಟಿದವರಿಗೆ ಶುಲ್ಕ ಪಾವತಿಸಲು ಹಣ ಇಲ್ಲ ಎಂದಾದರೆ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ಪಡೆಯಲೂ ಮುಖ್ಯಮಂತ್ರಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.  ಗೋ ಸಂತತಿ ಹೆಚ್ಚಿಸಲು ಪಶುಭಾಗ್ಯ ಕಲ್ಪಿಸಿದ್ದಾರೆ. ಈ ಎಲ್ಲ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಕಾರ್ಯಕರ್ತರು ಮುಂದಾಗಬೇಕು ಎಂದು ಸಚಿವ ಯು.ಟಿ.ಖಾದರ್ ನುಡಿದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಜಿಪಂ ಸಿಇಒ ಡಾ. ಎಂ.ಆರ್.ರವಿ, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯ ಮಂಜುಳಾ ಮಾಧವ್ ರಾವ್, ಕುರ್ನಾಡು ಗ್ರಾಪಂ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ಲೀಲಾವತಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಶಾಂತ್ ಕಾಜವ, ಕೆಪಿಸಿಸಿ ಸದಸ್ಯ ರಾಜ್‌ಕುಮಾರ್, ಮಾಜಿ ಜಿಪಂ ಸದಸ್ಯರಾದ ಎನ್.ಎಸ್.ಕರೀಂ, ಸಜಿಪ ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಚಿವ ಕಾಗೋಡು ತಿಮ್ಮಪ್ಪ, ಯು.ಟಿ.ಖಾದರ್, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಮತ್ತಿತರರನ್ನು ಸನ್ಮಾನಿಸಲಾಯಿತು.
ಜಿಪಂ ಸದಸ್ಯೆ ಮಮತಾ ಗಟ್ಟಿ ಸ್ವಾಗತಿಸಿದರು. ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English