ಕುಕ್ಕೆ ಸುಬ್ರಹ್ಮಣ್ಯ ದೇವರ ದರುಶನ ಪಡೆದ ಸಚಿವ ಡಿ.ಕೆ ಶಿವಕುಮಾರ ಕುಟುಂಬ

2:12 PM, Monday, September 25th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

DK Shivakumar ಸುಬ್ರಹ್ಮಣ್ಯ: ಐಟಿ ದಾಳಿ ಕುರಿತು ಸದ್ಯಕ್ಕೆ ತಾನೇನು ಪ್ರತಿಕ್ರೀಯಿಸುವುದಿಲ್ಲ. ಸೂಕ್ತ ಘಳಿಗೆ ಬಂದಾಗ ಪ್ರತಿಕ್ರೀಯಿಸುವೆ. ಆ ಶುಭ ಘಳಿಗೆ ತನಕ ಕಾದು ಬಳಿಕ ಐಟಿ ಧಾಳಿ ಕುರಿತು ಮಾತನಾಡುವೆ. ಅಲ್ಲಿ ತನಕ ಸ್ವಲ್ಪ ಸಮಯ ಕಾಯೋಣ ಎಂದು ತನ್ನ ಹಾಗೂ ಸಂಬಂಧಿಕರ ಮೇಲಿನ ಐಟಿ ದಾಳಿ ಕುರಿತು ಇಂಧನ ಸಚಿವ ಹಾಗೂ ಕಾಂಗ್ರೇಸ್‌ನ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ ಪ್ರತಿಕ್ರೀಯಿಸಿದರು.

ಕುಕ್ಕೆ ಸಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ಕುಟುಂಬ ಸದಸ್ಯರ ಜೊತೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಾರ್ಥನೆ ಹಾಗೂ ವಿವಿಧ ಸೇವೆಗಳನ್ನು ನೆರವೇರಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ ತಮ್ಮ ಹಾಗೂ ಕುಟುಂಬದ ಮೇಲಿನ ಐಟಿ ಧಾಳಿ ಸೇಡಿನ ರಾಜಕಾರಣವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಮೇಲಿನಂತೆ ಅವರು ಮಾರ್ಮಿಕವಾಗಿ ಉತ್ತರಿಸಿದರು.

DK Shivakumar ಮುಂದಿನ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೇಸ್ ಸರಕಾರ ಮತ್ತೆ ಅಧಿಕಾರ ಹಿಡಿಯಲಿದೆ. ಈಗಿರುವ ಸಂಖ್ಯೆಗಿಂತ 8 ರಿಂದ 10 ಸೀಟು ಹೆಚ್ಚು ಕಾಂಗ್ರೇಸ್ ಪಡೆದು ಅಧಿಕಾರ ನಡೆಸುತ್ತದೆ. ಇಷ್ಟೆ ಸೀಟು ಪಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ಭವಿಷ್ಯ ಹೇಳಲು ತನಗೆ ಬರುವುದಿಲ್ಲ. ಅಧಿಕಾರಕ್ಕಂತು ಕಾಂಗ್ರೇಸ್ ಬಂದೆ ಬರುತ್ತದೆ ಎಂದರು.

ಇಂದಿನ ಕ್ಷೇತ್ರ ಸಂದರ್ಶನ ಕುರಿತು ವಿಶೇಷ ಅರ್ಥ ಬೇಡ. ಇಲ್ಲಿಯ ಕ್ಷೇತ್ರದ ಬಗ್ಗೆ ಅಪಾರ ನಂಬಿಕೆ ಇದೆ. ಹಿಂದಿನಿಂದಲೂ ಕ್ಷೇತ್ರದ ಜೊತೆ ಸಂಪರ್ಕ ಇರಿಸಿಕೊಂಡಿದ್ದೇನೆ. ಕ್ಷೇತ್ರಕ್ಕೆ ಹಿಂದೆ ಹಲವು ಭಾರಿ ಭೇಟಿಕೊಟ್ಟಿದ್ದೇನೆ. ಈಗಲೂ ಕ್ಷೇತ್ರದ ಅಧಿದೇವರ ಆಣತಿಯಂತೆ ಪರಿವಾರ ಸಮೇತರಾಗಿ ಬಂದಿದ್ದೇನೆ. ಒಳ್ಳೆಯ ಹಾಗೂ ಕೆಟ್ಟ ಈ ಎರಡೂ ಕಾಲದಲ್ಲಿ ಕ್ಷೇತ್ರಕ್ಕೆ ಬಂದಿದ್ದೇನೆ. ತನ್ನ ಎರಡನೆ ಮಗಳ ಹೆಸರಿನಲ್ಲಿ ಈ ಹಿಂದೆ ಆಭರಣ ಮಾಲೆ ಹರಕೆ ಇಲ್ಲಿಯ ಸಬ್ರಹ್ಮಣ್ಯ ದೇವರಿಗೆ ಅರ್ಪಿಸಿದ್ದಾಗಿ ಅವರು ಹೇಳಿದರು.

ಸರಕಾರ, ನಾಡಿನ ಜನತೆ ಹಾಗೂ ಕುಟುಂಬದವರಿಗೆ ಶ್ರೀ ರಕ್ಷೆ ಒದಗಿಸುವಂತೆ ಶಾಂತಿ, ನೆಮ್ಮದಿ, ಸಹಭಾಳ್ವೆ ಕರುಣಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಭಕ್ತನಿಗು ಭಗವಂತನಿಗೂ ವ್ಯವಹಾರ ಮಾಡುವ ಸ್ಥಳ ದೇವಾಲಯ. ಹಾಗಾಗಿ ಇಲ್ಲಿಯ ಕ್ಷೇತ್ರದ ದೇವರು ಆಗಾಗ ತನ್ನನ್ನು ಇಲ್ಲಿಗೆ ಕರೆಯಿಸುತ್ತಲೆ ಇದ್ದಾರೆ ಅದರಂತೆ ಇಂದು ದೇವರ ಆಶಿರ್ವಾದ ಪಡೆದುಕೊಂಡಿದ್ದಾಗಿ ಅವರು ಹೇಳಿದರು.

ಸುಬ್ರಹ್ಮಣ್ಯ ಕ್ಷೇತ್ರ ಬಹಳಷ್ಟು ಅಭಿವೃದ್ಧಿ ಕಂಡಿದೆ. ಕ್ಷೇತ್ರದಲ್ಲಿ ಎಲ್ಲಾ ತರಹದ ಸೇವೆಗಳು ಭಕ್ತರಿಗೆ ಲಭಿಸುವಂತಾಗಿದೆ. ಮತ್ತಷ್ಟೂ ಅಭಿವೃದ್ದಿಗೆ ವೇಗ ನೀಡಿ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೆಲಸಗಳು ಆಗಬೇಕು. ಈ ಕುರಿತು ಮುಖ್ಯಂತ್ರಿಗಳ ಗಮನಕ್ಕೆ ತರುತ್ತೇನೆ. ಸಿ.ಎಂ ಸಮಯ ನೋಡಿಕೊಂಡು ಭೇಟಿಗೆ ದಿನ ನಿಗದಿಪಡಿಸಿ ಇಲ್ಲಿಯ ವ್ಯವಸ್ಥಾಪನ ಸಮಿತಿ ಸದಸ್ಯರನ್ನು ಕರೆಯಿಸಿ ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ ತನ್ನ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ದೇವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ನೇತೃತ್ವದ ವ್ಯವಸ್ಥಾಪನ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸುಳ್ಯದಲ್ಲಿ 110 ಕೆ.ವಿ ವಿದ್ಯುತ್ ಸಬ್‌ಸ್ಟೇಶನ್ ಘಟಕ ಕಾರ‍್ಯಾರಂಭ ವಿಳಂಬವಾಗುತ್ತಿರುವ ಕುರಿತು ಪಕ್ಷದ ಮುಖಂಡರು ಸಚಿವರ ಗಮನಕ್ಕೆ ತಂದಾಗ ಸ್ಥಳದಲ್ಲಿದ್ದ ಮೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ಇರುವ ಅಡಚಣೆಗಳ ನಿವಾರಣೆಗೆ ಕ್ರಮವಹಿಸುವಂತೆ ಅವರು ಸೂಚಿಸಿದರು.

ಜನನಿಬಿಡ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಇಂದಿರ ಕ್ಯಾಂಟಿನ್ ಆರಂಭಿಸುವ ವಿಚಾರ ಸದ್ಯಕ್ಕೆ ಪ್ರಸ್ತಾಪದಲ್ಲಿ ಇಲ್ಲ. ಕ್ಷೇತ್ರದಲ್ಲಿ ದಿನಲೂ ಭಕ್ತರಿಗೆ ಮಹಾ ಅನ್ನ ಪ್ರಸಾದ ಸೇವೆ ನಡೆದುಕೊಂಡು ಬರುತ್ತಿರುವುದರಿಂದ ಅದರ ಅವಶ್ಯಕತೆ ಇಲ್ಲ ಎಂದೆಣಿಸುತ್ತಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ವಿಸ್ತರಣೆ ಆದ ಬಳಿಕ ಇದರ ಕುರಿತು ಗಮನಹರಿಸುವುದಾಗಿ ಹೇಳಿದರು.

DK Shivakumar ಪತ್ನಿ ಹಾಗೂ ಪುತ್ರ ಪುತ್ರಿಯರ ಜೊತೆ ಆಗಮಿಸಿದ ಸಚಿವರನ್ನು ದೇವಳದ ಪ್ರಧಾನ ಅರ್ಚಕ ವೇ. ಮೂ. ಸೀತಾರಾಮ ಎಡಪಡಿತ್ತಾಯರು ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಗೌರವಿಸಿದರು. ದೇವರ ದರುಶನ ಪಡೆದ ಸಚಿವರು ಅಕ್ಕಿಯಿಂದ (95ಕಿಲೋ) ತುಲಾಭಾರ ಸೇವೆ ಪೂರೈಸಿದರು ಇದೇ ವೇಳೆ ಪುತ್ರ ಹಾಗೂ ಎರಡು ಪುತ್ರಿಯರ ತುಲಾಭಾರ ಸೇವೆ ಕೂಡ ನೆರವೇರಿಸಿದರು. ಕುಟುಂಬ ಸದಸ್ಯರ ಜೊತೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ನಾಗಪ್ರತಿಷ್ಠೆ, ಮಹಾಪೂಜೆ ಸಲ್ಲಿಸಿದ ಬಳಿಕ ದೇವಳದಲ್ಲಿ ಮದ್ಯಾಹ್ನದ ಅನ್ನ ಪ್ರಸಾದ ಭೋಜನ ಸ್ವೀಕರಿಸಿದರು. ಶ್ರೀ ಸಂಪುಟ ನರಸಿಂಹ ಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಆಶಿರ್ವಾದ ಪಡೆದರು.

ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ವಾಗತಿಸಿದರು. ದೇವಳದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಹೆಚ್ ಎಂ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ, ಚಂದ್ರಶೇಖರ ಪೇರಾಲು, ಸಮಿತಿ ಸದಸ್ಯರಾದ ಮಹೇಶ್‌ಕುಮಾರ ಕೆ ಎಸ್, ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಮಾಧವ ಡಿ, ಕೆಪಿಸಿಸಿ ಸದಸ್ಯ ವೆಂಕಪ್ಪ ಗೌಡ, ರಾಜೀವ್ ಗಾಂಧಿ ವಿ.ವಿ ಸೆನೆಟ್ ಸದಸ್ಯ ಡಾ.ರಘು, ಯೂತ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ತಾ.ಪಂ ಸದಸ್ಯ ಅಶೋಕ ನೆಕ್ರಾಜೆ, ಪಿ.ಸಿ ಜಯರಾಮ, ಪಿ ಎಸ್ ಗಂಗಾಧರ ದೇವಳದ ಶಿಷ್ಟಚಾರ ಅಧಿಕಾರಿ ಗೋಪಿನಾಥ್ ನಂಬೀಶ ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English