ಮೈಸೂರಿನಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ.

2:42 PM, Monday, October 2nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

mysurudasaraಮೈಸೂರು : ಮಧ್ಯಾಹ್ನ 2.16ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.

ಅರಮನೆಯ ಮುಂಭಾಗದ ಸಭಾಂಗಣಕ್ಕೆ ತೆರೆದ ಜೀಪಿನಲ್ಲಿ ಬಂದು ಮೊಮ್ಮಕ್ಕಳ ಜೊತೆ ಸುಮಾರು ಎರಡೂವರೆ ತಾಸು ಆ ಸೊಬಗು ವೀಕ್ಷಿಸಿದರು. ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮ್ಮದ್‌, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ, ರಮಾನಾಥ ರೈ, ಎಚ್‌.ಆಂಜನೇಯ, ಪ್ರಿಯಾಂಕ್‌ ಖರ್ಗೆ, ಎಂ.ಸಿ.ಮೋಹನಕುಮಾರಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಮೇಯರ್‌ ಎಂ.ಜೆ.ರವಿಕುಮಾರ್‌, ಜಿಲ್ಲಾಧಿಕಾರಿ ಡಿ.ರಂದೀಪ್ ಜೊತೆಗಿದ್ದರು.

ನಾಡಿನ ವೈವಿಧ್ಯಮಯ ಸಂಸ್ಕೃತಿ ಬಿಂಬಿಸುವ ಕಲಾತಂಡಗಳು ನೋಡು ಗರ ಮನಸೆಳೆದವು. ಸ್ತಬ್ಧಚಿತ್ರಗಳು ರಾಜ್ಯದ ಭವ್ಯ ಇತಿಹಾಸ ಸಾರಿದವು. ಬಾಗಲಕೋಟೆ ಜಿಲ್ಲೆಯ ತೇರದಾಳದ ಝಾಂಝ್‌ ಮೇಳವು ಕನ್ನಡ ಧ್ವಜ ಬೀಸುತ್ತಾ ಬರುತ್ತಿದ್ದಂತೆ ಸಡಗರ ಜೋರಾಯಿತು.

ಉತ್ಸವ ಮೂರ್ತಿ ಚಾಮುಂಡೇಶ್ವರಿ ಇದ್ದ ಅಂಬಾರಿ ಹೊತ್ತ ‘ಅರ್ಜುನ’ ಆನೆಯು ಅರಮನೆ ಎದುರು ಪೂಜೆಗಾಗಿ ನಿರ್ಮಿಸಿದ್ದ ವಿಶೇಷ ವೇದಿಕೆ ಪಕ್ಕ ಬಂದು ನಿಲ್ಲುತ್ತಿದ್ದಂತೆ ಎಲ್ಲರೂ ಎದ್ದು ನಿಂತು ನಮಿಸಿದರು.

ಮೆರವಣಿಗೆ ಕೊನೆಯಲ್ಲಿ ಅಂದರೆ ಸಂಜೆ 5.04ಕ್ಕೆ ಸಿದ್ದರಾಮಯ್ಯ ಅವರು ವಿಶೇಷ ವೇದಿಕೆ ಮೇಲೇರಿ ಉತ್ಸವ ಮೂರ್ತಿಗೆ ಮಲ್ಲಿಗೆ, ಕನಕಾಂಬರ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಚಪ್ಪಾಳೆಯ ಭೋರ್ಗರೆತ. ಅರ್ಜುನ ಆನೆಯು ಸೊಂಡಿಲೆತ್ತಿ ಎಲ್ಲರಿಗೂ ನಮಸ್ಕರಿಸಿತು.

ಗಜಪಡೆಯು ಅರಮನೆ ಆವರಣ ದಾಟಿ ಬಲರಾಮ ದ್ವಾರದ ಮೂಲಕ ಹೊರಬರುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತು. ಸತತ ಆರನೇ ಬಾರಿ 750 ಕೆ.ಜಿ ತೂಕದ ಅಂಬಾರಿ ಹೊತ್ತ 57 ವರ್ಷದ ಅರ್ಜುನ ಆನೆಯು ರಾಜ ಗಾಂಭೀರ್ಯದಿಂದ ಹೆಜ್ಜೆ ಇಟ್ಟಿತು. ಅದರ ಅಕ್ಕಪಕ್ಕವಿದ್ದ ಹೆಣ್ಣಾನೆಗಳಾದ ವಿಜಯಾ ಹಾಗೂ ಕಾವೇರಿ (ಕುಮ್ಕಿ ಆನೆಗಳು) ಸೊಂಡಿಲು ಅಲುಗಾಡಿಸುತ್ತಾ ಧೈರ್ಯ ತುಂಬುತ್ತಿದ್ದವು.

ಮುಂದೆ ಸರ್ವಾಲಂಕಾರಭೂ ಷಿತವಾಗಿದ್ದ ‘ನಿಶಾನೆ’ ಬಲರಾಮ, ‘ನೌಫತ್‌’ ಆನೆ ಅಭಿಮನ್ಯು ಸಾಗಿದವು. ‘ಸಾಲಾನೆ’ಗಳಾದ ಗೋಪಾಲಕೃಷ್ಣ, ಹರ್ಷ, ಗಜೇಂದ್ರ, ಪ್ರಶಾಂತ, ವರಲಕ್ಷ್ಮಿ, ಕೃಷ್ಣ, ದ್ರೋಣ, ಭೀಮ ಬಿರುಸಿನ ಹೆಜ್ಜೆ ಇಡುತ್ತಾ ಬನ್ನಿಮಂಟಪದತ್ತ ಹೊರಟವು.

ಮೆರವಣಿಗೆಯು ಚಾಮರಾಜೇಂದ್ರ ವೃತ್ತ, ಕೆ.ಆರ್‌ ವೃತ್ತ, ಸಯ್ಯಾಜಿರಾವ್‌ ರಸ್ತೆ, ಆಯುರ್ವೇದ ವಿದ್ಯಾಲಯ, ಬಂಬೂ ಬಜಾರ್‌, ಹೈವೇ ವೃತ್ತ, ನೆಲ್ಸನ್‌ ಮಂಡೇಲಾ ರಸ್ತೆಯಲ್ಲಿ ಹಾದು ಬನ್ನಿಮಂಟಪ ತಲುಪಿತು.

ಅಷ್ಟರಲ್ಲಿ ಸೂರ್ಯ ಅಸ್ತಂಗತವಾಗಿದ್ದ. ಹಲವು ನೆನಪುಗಳ ಹೊತ್ತ ಅರಮನೆ ನಗರಿಯ ವಿದ್ಯುತ್‌ ದೀಪಗಳು ದಸರಾ ಸಂಭ್ರಮಕ್ಕೆ ಬೀಳ್ಕೊಡಲು ಸಿದ್ಧವಾಗುತ್ತಿದ್ದವು. ಪಂಜಿನ ಕವಾಯತಿನ ಸಡಗರದೊಂದಿಗೆ 407ನೇ ದಸರಾ ವೈಭವಕ್ಕೆ ತೆರೆ ಬಿತ್ತು.

ಅರಮನೆ ಆವರಣದಲ್ಲೇ 25 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಸಾವಿರಾರು ಮಂದಿ ನಿಂತುಕೊಂಡೇ ವೀಕ್ಷಿಸಿದರು. ಅಲ್ಲದೆ, ದಾರಿಯುದ್ದಕ್ಕೂ ತಾತ್ಕಾಲಿಕ ಶಾಮಿಯಾನ ಹಾಕಿ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಹೈಕೋರ್ಟ್‌ ಮುಖ್ಯ ನ್ಯಾಯ ಮೂರ್ತಿ ಎಸ್‌.ಕೆ.ಮುಖರ್ಜಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ ಅವರು ದಸರಾ ಮೆರವಣಿಗೆ ಕಣ್ತುಂಬಿಕೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English