ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡರೆ ಅಭಿವೃದ್ಧಿ ಸಾಧಿಸಲು ಸಾಧ್ಯ: ಹೆಗ್ಗಡೆ

4:46 PM, Sunday, August 21st, 2011
Share
1 Star2 Stars3 Stars4 Stars5 Stars
(No Ratings Yet)
Loading...

D Veerendra Hegde/ ಡಾ| ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ವಶಿಕ್ಷಣ ಅಭಿಯಾನದ ಆಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ ಕುರಿತ ಶೈಕ್ಷಣಿಕ ಸಮಾವೇಶ ಹಾಗೂ ಮಾಹಿತಿ ಕಾರ್ಯಾಗಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯದ ಬಳಿಕ ದೇಶ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಕ್ರಾಂತಿ ದೇಶದ ಒಟ್ಟು ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸಿದೆ ಸುಮಾರು 40 ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಬಡರಾಷ್ಟ್ರ ಎಂದು ಪರಿಗಣಿಸಲ್ಟಟ್ಟಿದ್ದ ಭಾರತ ಇಂದು ವಿಶ್ವದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಮೂಡಿಬರುತ್ತಿದೆ. ವಿದೇಶಗಳು ಹೂಡಿಕೆಗೆ ಭಾರತವನ್ನು ಪ್ರಶಸ್ತ ತಾಣವಾಗಿ ಆಯ್ಕೆ ಮಾಡುತ್ತಿವೆ. ಇದಕ್ಕೆ ಮೂಲ ಕಾರಣ ದೇಶ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಕ್ರಾಂತಿ. ಕೇವಲ ಅಭಿವೃದ್ಧಿ ಮಾತ್ರವಲ್ಲದೆ ಸಾಮಾಜಿಕ ಕ್ರಾಂತಿಯಲ್ಲೂ ಶಿಕ್ಷಣ ಮಹತ್ತರ ಪಾತ್ರವನ್ನು ವಹಿಸಿದೆ ಎಂದು ಅವರು ವಿವರಿಸಿದರು.

ಸಾಮರ್ಥ್ಯವನ್ನು ಅವಕಾಶದೊಂದಿಗೆ ಸದುಪಯೋಗಪಡಿಸಿಕೊಂಡರೆ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಅದುದರಿಂದ ಹೆಚ್ಚು ಹೆಚ್ಚು ಅವಕಾಶಗಳ ಸೃಷ್ಟಿಯಾಗಬೇಕು ಮತ್ತು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದವರು ಹೇಳಿದರು. ಮಧ್ಯಾಹ್ನದ ಬಿಸಿಯೂಟದ ಮೂಲಕ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಲಭಿಸುತ್ತಿದೆ. ಆ ಮೂಲಕ ಬಡ ಮಕ್ಕಳು ಸಮರ್ಪಕವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ. ಹಸಿವಿನ ದಾಹ ನೀಗಿದಾಗ ಜ್ಞಾನದ ದಾಹವನ್ನು ಮಕ್ಕಳು ಹಿಂಗಿಸಿಕೊಳ್ಳುತ್ತಾರೆ ಎಂದವರು ಹೇಳಿದರು

ಮುಖ್ಯ ಅತಿಥಿಯಾಗಿದ್ದ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖಾ ಕಾರ್ಯದರ್ಶಿ ಕುಮಾರ್‌ ನಾಯಕ್‌ ಹಾಗೂ ಜಿಲ್ಲಾಧಿಕಾರಿ ಡಾ| ಚನ್ನಪ್ಪ ಗೌಡ ಮಾತನಾಡಿದರು

ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್‌. ವಿಜಯಪ್ರಕಾಶ್‌, ಸ್ಥಾಯೀಸಮಿತಿ ಅಧ್ಯಕ್ಷ ಈಶ್ವರ ಕಟೀಲು, ಮಧ್ಯಾಹ್ನ ಉಪಹಾರ ಯೋಜನೆಯ ಜಂಟಿ ನಿರ್ದೇಶಕ ಬಿ.ಜಿ. ನಾಯಕ್‌, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಜಂಟಿ ನಿರ್ದೇಶಕಿ ಫಿಲೋಮಿನಾ ಲೋಬೋ ಅತಿಥಿಗಳಾಗಿದ್ದರು. ಡಿಡಿಪಿಐ ಮೋಸೆಸ್‌ ಜಯಶೇಖರ್‌ ಸ್ವಾಗತಿಸಿದರು. ಡಯೆಟ್‌ ಉಪನಿರ್ದೇಶಕ ಪಾಲಾಕ್ಷಪ್ಪ ವಂದಿಸಿದರು. ಶಿವಪ್ರಕಾಶ್‌ ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English