ಮಂಗಳೂರು: ದಸರಾ ರಜೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಪುಣ್ಯ ಕ್ಷೇತ್ರಗಳಿಗೆ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿ, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕಟೀಲು, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕಾಗಿ ಭಕ್ತ ಸಾಗರವೇ ಹರಿದು ಬರುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಕ್ಷೇತ್ರದ ಪ್ರಮುಖ ಸೇವೆಗಳಾದ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಮತ್ತಿತರ ಸೇವೆಗಳು ಅಧಿಕವಾಗಿ ನೆರವೇರುತ್ತಿವೆ.ದೇವಳದ ಒಳಾಂಗಣ, ಹೊರಾಂಗಣ, ರಥಬೀದಿ, ಸುಬ್ರಹ್ಮಣ್ಯ ಕುಮಾರಧಾರ ಸ್ನಾನ ಘಟ್ಟದಲ್ಲಿ ಭಾರೀ ಜನಸಂದಣಿ ಕಂಡು ಬಂದಿದೆ. ದೇವರ ದರ್ಶನ ಪಡೆಯಲು, ಅನ್ನ ಪ್ರಸಾದ ಸ್ವೀಕರಿಸಲು ಭಕ್ತರು ಮಾರುದ್ದ ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು.
ಗಾಂಧಿ ಜಯಂತಿ ಪ್ರಯುಕ್ತ ರಜೆ ಇರುವುದರಿಂದ ಮಂಗಳವಾರದವರೆಗೆ ತೀರ್ಥ ಕ್ಷೇತ್ರಗಳಲ್ಲಿ ಭಕ್ತರ ಸಂದಣಿ ಅಧಿಕವಾಗಿರುವ ಸಾಧ್ಯತೆ ಇದೆ.
Click this button or press Ctrl+G to toggle between Kannada and English