ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಮುಂಜಾನೆ ಮಂಗಳೂರಿಗೆ ಆಗಮಿಸಿದ್ದಾರೆ. ಅಹಮದಾಬಾದ್ ನಿಂದ ವಿಶೇಷ ವಿಮಾನದ ಮೂಲಕ ಹೊರಟ ಅಮಿತ್ ಶಾ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ ಸುಮಾರು 1:30 ಗಂಟೆಗೆ ಆಗಮಿಸಿದರು.
ಕಮಲ ಪಾರ್ಟಿಯ ಚಾಣಕ್ಯನನ್ನು ವಿಮಾನ ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕೇರಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೆ ಸುರೇಂದ್ರನ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರ್ ಸೇರಿದಂತೆ ಪ್ರಮುಖ ನಾಯಕರು ಸ್ವಾಗತಿಸಿದರು.
ವಿಮಾನ ನಿಲ್ದಾಣದಲ್ಲಿ ತಡರಾತ್ರಿಯವರೆಗೂ ಕಾದು ಕುಳಿತಿದ್ದ ಬಿಜೆಪಿ ಕಾರ್ಯಕರ್ತರಿಗೆ ಶಾ ಆಗಮನ ರಣೋತ್ಸಾಹ ತಂದಿತ್ತು. ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಕಾರ್ಯಕರ್ತರಿಗೆ ಕೈ ಬೀಸಿ ಅಭಿನಂದನೆ ಸಲ್ಲಿಸಿದ ಶಾ, ರಾತ್ರಿಯೇ ಕೇರಳಕ್ಕೆ ತೆರಳಿದರು.
ಅಮಿತ್ ಶಾ ಅವರೊಂದಿಗೆ ಕೇರಳದ ಗಡಿಭಾಗ ತಲಪಾಡಿ ತನಕ ತೆರಳಿದ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ದೇವರ ಸ್ವಂತ ನಾಡಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನು ಬೀಳ್ಕೊಟ್ಟರು.
ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್.ಎಸ್.ಎಸ್ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ ಇಂದು ಬೆಳಗ್ಗೆ 10 ಗಂಟೆಗೆ ಕೇರಳದ ಪಯ್ಯನೂರಿನಿಂದ ಆಯೋಜಿಸಿರುವ ಬೃಹತ್ ಜನರಕ್ಷಾ ಪಾದಯಾತ್ರೆಗೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಶಾ ನಂತರ ರಾತ್ರಿ ಮಂಗಳೂರಿಗೆ ವಾಪಸ್ ಬಂದು ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 4 ರಂದು ಇಡೀ ದಿನ ಮಂಗಳೂರಿನಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
Click this button or press Ctrl+G to toggle between Kannada and English