ಮೂಡಬಿದಿರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಇವುಗಳ ಸಹಯೋಗದೊಂದಿಗೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಬಿಸಿ ಊಟ ಒದಗಿಸುವ, ಮೂಡಬಿದಿರೆ ಹೋಬಳಿ ಮಟ್ಟದ ‘ಮಾತೃಪೂರ್ಣ’ ಕಾರ್ಯಕ್ರಮಕ್ಕೆ ಶಾಸಕ ಕೆ. ಅಭಯಚಂದ್ರ ಅವರು ಕಲ್ಲಮುಂಡ್ಕೂರು ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಚಾಲನೆ ನೀಡಿದರು.
ಮಹಿಳೆಯರು ಮತ್ತು ಮಕ್ಕಳು ಆರೋಗ್ಯವಂತರಾಗಿಬೇಕು. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರದ ಮೂಲಕ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಶಿಶುಗಳ ಬೆಳವಣಿಗೆಗಳ ಕೊರತೆ, ಗರ್ಭಿಣಿ, ಬಾಣಂತಿಯರು ಹಾಗೂ ಶಿಶುಗಳ ಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದರ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ, ಉಪಾಧ್ಯಕ್ಷ ಸುಂದರ ಪೂಜಾರಿ, ತಾ.ಪಂ ಸದಸ್ಯ ಸುಕುಮಾರ್ ಸನಿಲ್, ಗ್ರಾ.ಪಂ. ಸದಸ್ಯರಾದ ಗೀತಾ ಶೆಟ್ಟಿ, ಸತೀಶ್ ಅಮೀನ್, ಕಲ್ಲಮುಂಡ್ಕೂರು ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಸುಜಿತ್ ಬಾಬು, ಪಿಡಿಒ ಉಗ್ಗಪ್ಪ ಮೂಲ್ಯ, ಶಿಕ್ಷಕ ಗುರು ಎಂ.ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಗನವಾಡಿ ಕೇಂದ್ರದ ಶಿಕ್ಷಕಿ ವಿಜಯಾ ಪೈ ಉಪಸ್ಥಿತರಿದ್ದರು.
ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮುಖ್ಯ ಅತಿಥಿಯಾಗಿ ಮಾತನಾಡಿ, ಗಾಂಧೀಜಿ ಜನ್ಮ ದಿನದ ಪ್ರಯುಕ್ತ ಕೇಂದ್ರ ಸರಕಾರದ ಸ್ವತ್ಛತಾ ಅಭಿಯಾನ ಹಾಗೂ ರಾಜ್ಯ ಸರಕಾರದ ಮಾತೃಪೂರ್ಣ ಯೋಜನೆ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ ಮಕ್ಕಳಿಗೆ ನೀಡುವ ಊಟದ ಜತೆಗೆ ತಾಯಂದಿರಿಗೂ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡುವ ವ್ಯವಸ್ಥೆ ಪರಿಪೂರ್ಣವಾದ ಯೋಜನೆಯಾಗಿದೆ ಎಂದರು.
Click this button or press Ctrl+G to toggle between Kannada and English