ಮಂಗಳೂರು: ಜಿಲ್ಲೆಯ ಗಾಂಜಾ ಮಾಫಿಯಾ, ಕಾಂಗ್ರೆಸ್‌ನ ಸಚಿವರು, ಮುಖಂಡರ ನಿಯಂತ್ರಣಕ್ಕೊಳಪಟ್ಟಿದೆ. ಅದರಿಂದ ಬಂದ ಹಣದಿಂದ ಸಚಿವರು ಬದುಕು ಕಟ್ಟುತ್ತಿದ್ದಾರೆ. ಇಲ್ಲವಾಗಿದ್ದಲ್ಲಿ ಜಿಲ್ಲೆಯಲ್ಲಿ ಈ ಮಾಫಿಯಾವನ್ನು ನಿಯಂತ್ರಿಸಬಹುದಿತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಈ ಗಂಭೀರ ಆರೋಪ ಮಾಡಿದರು..
ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಗಾಂಜಾ ಪ್ರಕರಣಗಳು ಹೆಚ್ಚುತ್ತಾ ಸಾಗುತ್ತಿವೆ. ಆರಂಭದಲ್ಲಿಯೇ ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ಪಡೆಯೊಂದನ್ನು ರಚಿಸಬೇಕು ಎಂದು ಬಹಳಷ್ಟು ಸಲ ಹೇಳಿದರೂ ಕೂಡ ಏನೂ ಪ್ರಯೋಜನವಾಗಿಲ್ಲ. ದ.ಕ. ಜಿಲ್ಲೆ ಬುದ್ದಿವಂತರ ಜಿಲ್ಲೆಯ ಜತೆಯಲ್ಲಿ ಮಾದಕ ವಸ್ತುಗಳ ತಾಣವಾಗಿ ಬದಲಾಗುತ್ತಿದೆ. ಇದಕ್ಕೆಲ್ಲ ಆಡಳಿತ ಪಕ್ಷ ಹಾಗೂ ಪೊಲೀಸ್ ಇಲಾಖೆ ನೇರ ಕಾರಣ ಎಂದು ಅವರು ಹೇಳಿದರು.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಕೂಡಾ ಗಾಂಜಾದಂತಹ ಮಾದಕ ವಸ್ತುಗಳು ಸಿಗುತ್ತಿವೆ. ಪೊಲೀಸ್ ಇಲಾಖೆ ಹಾಗೂ ಸರಕಾರ ಸಂಪೂರ್ಣ ವಾಗಿ ಈ ವಿಚಾರದಲ್ಲಿ ಸೋತಿದೆ. ಕಾಂಗ್ರೆಸ್‌ನ ನೇತಾರರು ಗಾಂಜಾ ಮಾಫಿಯಾಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಕಷ್ಟು ಕೊಲೆಯಲ್ಲಿ ಗಾಂಜಾ ಬಳಕೆಯ ವಿಚಾರಗಳು ಹೊರಬಂದಿವೆ. ಸರಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮದ ಜತೆಯಲ್ಲಿ ಸಂಬಂಧಪಟ್ಟವರನ್ನು ಬಂಧಿಸಿ ಕ್ರಮ ಜರುಗಿಸಬೇಕು. ಅದೇ ರೀತಿಯಲ್ಲಿ ಉಳ್ಳಾಲದಲ್ಲಿ ಹತ್ಯೆಯಾದ ಝುಬೈರ್ ಪ್ರಕರಣವನ್ನು ತನಿಖೆಗಾಗಿ ಎನ್‌ಐಎಗೆ ಹಸ್ತಾಂತರ ಮಾಡಬೇಕು. ಹತ್ಯೆಯಾದ ಝುಬೈರ್ ಸಾವಿಗೆ ನ್ಯಾಯ ಸಿಗಬೇಕು ಎಂದರು.
ಜಿಲ್ಲೆಯಲ್ಲಿ ಇಂದು ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ. ಕಾನೂನು ಮುರಿಯುವವರನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದೆ. ಕೇರಳ ಮಾದರಿಯಲ್ಲಿ ಇಲ್ಲೂ ರಾಜಕೀಯ ಹತ್ಯೆಗಳು ನಡೆಯುತ್ತಿವೆ. ಕೇರಳದಲ್ಲಿ ಸಿಪಿಎಂ ಪಕ್ಷದವರು ಬಿಜೆಪಿಯರನ್ನು ಗುರಿಮಾಡಿಕೊಂಡು ಕೊಲ್ಲುತ್ತಿದ್ದಾರೆ. ಕರಾವಳಿಯಲ್ಲೂ ಇದೇ ಮಾದರಿಯಲ್ಲಿ ಮುಂದುವರಿಯುತ್ತಿದೆ. ಕೇರಳದಲ್ಲಿ ಕಮ್ಯೂನಿಷ್ಟ್ ಆಡಳಿತಕ್ಕಾಗಿ ಈ ರೀತಿಯ ಕೃತ್ಯ ಮಾಡಿದರೆ, ಕರಾವಳಿಯಲ್ಲಿ ಕಾಂಗ್ರೆಸಿಗರು ಸೋಲಿನ ಭೀತಿಯಿಂದ ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ಇದರಿಂದ ಏನೂ ಲಾಭವಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
Click this button or press Ctrl+G to toggle between Kannada and English