ಮಂಗಳೂರು: ಬ್ಯಾಂಕ್‌ಗಳಿಂದ ನಾಲ್ಕೈದು ವರ್ಷ ಗಳ ಅವಧಿಯಲ್ಲಿ 83,291 ಮಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಜಿಲ್ಲೆಯಲ್ಲಿ ವಿತರಿಸಲಾಗಿದೆ ಯಾದರೂ, ಅದರಿಂದ ಒಬ್ಬರಿಗೂ ಪ್ರಯೋಜನವಾಗಿಲ್ಲ. ರೈತರಿಗೆ ಅತ್ಯಂತ ಉಪಯುಕ್ತವಾದ ಈ ಯೋಜನೆಯ ಬಗ್ಗೆ ಕೃಷಿಕರಿಗೆ ಮಾಹಿತಿ ಇಲ್ಲವಾದ್ದರಿಂದ ಅದರ ಪ್ರಯೋಜನ ಸಿಗುತ್ತಿಲ್ಲ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಜಿಲ್ಲೆಯ ಬ್ಯಾಂಕ್‌ಗಳ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಅವರಿಗೆ ಬ್ಯಾಂಕ್ ಅಧಿಕಾರಿಗಳಿಂದ ಇಂಥ ಮಾಹಿತಿ ಸಿಕ್ಕಿತು!
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದ ರೈತರಿಗೆ ಆಕಸ್ಮಿಕ ಅಪಘಾತ ಹಾಗೂ ಸಾವು ಪ್ರಕರಣಗಳಿಗೆ ಪರಿಹಾರ ಧನ ಲಭ್ಯವಾಗುತ್ತದೆ. ಎಷ್ಟು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸಂಸದರು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಯಾರೂ ಇದರ ಲಾಭ ಪಡೆದುಕೊಂಡಿಲ್ಲ ಎಂಬ ಉತ್ತರ ಸಿಕ್ಕಿತು. ಈ ವೇಳೆ ಮಾತನಾಡಿದ ಸಂಸದರು, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನದ ಬಗ್ಗೆ ಮಾಹಿತಿ ಇಲ್ಲದ್ದರಿಂದಾಗಿ ಫಲಾನುಭವಿಗಳೇ ಇಲ್ಲವಾಗಿದೆ. ಇಲ್ಲವಾದಲ್ಲಿ ಕಳೆದ ನಾಲ್ಕು ವರ್ಷ ಗಳಿಂದ ಜಿಲ್ಲೆಯಲ್ಲಿ ಕಿಸಾನ್ ಕಾರ್ಡ್ ಹಂಚಿಕೆಯಲ್ಲಿ ಉತ್ತಮ ಸಾಧನೆಯಾಗಿದೆಯಾದರೂ ಪ್ರಯೋಜನ ಪಡೆದವರೇ ಇಲ್ಲವೆಂದರೆ ನಂಬಲಾಗದು. ಹೀಗಾಗಿ, ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳು ತಮ್ಮ ಪ್ರಚಾರ ಸಾಹಿತ್ಯ ಸಾಮಗ್ರಿಗಳಲ್ಲಿ (ಬ್ರೌಶರ್, ಕರಪತ್ರ) ಕಿಸಾನ್ ಕ್ರೆಡಿಟ್ ಕಾರ್ಡ್‌ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೃಷಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಗುವ ಬದಲು ಸಹಕಾರಿ ಬ್ಯಾಂಕ್‌ಗಳನ್ನೇ ಅವಲಂಬಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತ ಸ್ನೇಹಿಯಾಗಿಲ್ಲ ಎಂಬ ಕಲ್ಪನೆ ಅವರಲ್ಲಿದೆ. ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಪವಾದವೂ ಇದೆ. ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆಯನ್ನು ವಾಣಿಜ್ಯ ಬೆಳೆಯಾಗಿ ರೈತರು ಬೆಳೆಯುತ್ತಿರುವುದರಿಂದ ನಷ್ಟ ಕಡಿಮೆ. ಹಳೆಯಂಗಡಿಯಲ್ಲಿ ರೈತರೊಬ್ಬರು ಹೊಂಡದಲ್ಲಿ ಸಿಗಡಿ ಕೃಷಿ ಮಾಡಿ ಮೂರು ತಿಂಗಳಲ್ಲೇ ದುಪ್ಪಟ್ಟು ಆದಾಯವನ್ನು ಗಳಿಸಿದ್ದಾರೆ. ಇಂತಹ ಪ್ರಕರಣಗಳು ಹಲವು ಇವೆ. ಬ್ಯಾಂಕ್‌ಗಳು ರೈತರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಶೀಲತೆಯೊಂದಿಗೆ ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂದು ಸೂಚಿಸಿದರು.
2017ರ ಜೂನ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಒಟ್ಟು 61,346 ಕೋಟಿ ರೂ.ಗಳ ವ್ಯವಹಾರವನ್ನು ದಾಖಲಿಸಿವೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ ಯಜಮಾನ್ಯ ತಿಳಿಸಿದರು. ಆರ್‌ಬಿಐ ಪ್ರತಿನಿಧಿ ವಿದ್ಯಾಸಾಗರ್, ನಬಾರ್ಡ್ ಡಿಡಿಎಂ ಪ್ರತಾಪ್, ಸಿಂಡಿಕೇಟ್ ಬ್ಯಾಂಕ್ ಡಿಜಿಎಂ ಸೋಮಯಾಜಿ, ಜಿ.ಪಂ. ಉಪ ಕಾರ್ಯದರ್ಶಿ ಎನ್. ಆರ್. ಉಮೇಶ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English