ಮಂಗಳೂರು: ನಗರದ ತ್ಯಾಜ್ಯವನ್ನು ಕೂಳೂರು ಬಳಿಯ ಜಾಗದಲ್ಲಿ ತಂದು ಸುರಿಯಲಾಗುತ್ತಿದ್ದು, ಇದು ನಗರದ ಎರಡನೇ ಡಂಪಿಂಗ್ ಯಾರ್ಡ್‌ನಂತೆ ಕಂಡು ಬರುತ್ತಿದೆ.
ಸಮೀಪದಲ್ಲೇ ಇರುವ ರಸ್ತೆಯಲ್ಲಿ ಸಾಗುವ ಜನರು ದುರ್ವಾಸನೆಯಿಂದ ಮೂಗು ಮುಚ್ಚಿ ನಡೆಯುವಂತಾಗಿದೆ. ಪಾದಚಾರಿ ಮಾರ್ಗ ಕಸದ ತೊಟ್ಟಿಯಾಗಿದ್ದು, ದಿನೇ ದಿನೇ ತ್ಯಾಜ್ಯವೂ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇದಾಗಿರುವುದರಿಂದ ಸ್ವತ್ಛತೆಗೆ ಧಕ್ಕೆ ತರುತ್ತಿದೆ. ಮಾತ್ರವಲ್ಲ, ತ್ಯಾಜ್ಯ ರಾಶಿಗೆ ನಾಯಿಗಳ ಹಿಂಡು ಬರುವುದರಿಂದ ದ್ವಿಚಕ್ರ ಸವಾರರಿಗೆ ಕಂಟಕವಾಗುತ್ತಿದೆ. ವಿವಿಧೆಡೆಯಿಂದ ರಾತ್ರಿ ವೇಳೆ ವಾಹನದಲ್ಲಿ ತಂದು ಹೆದ್ದಾರಿ ಬದಿಯೇ ನಿಲ್ಲಿಸಿ ತ್ಯಾಜ್ಯ ಸುರಿಯಲಾಗುತ್ತದೆ. ಇದರಿಂದಾಗಿ ಚತುಷ್ಪಥ ರಸ್ತೆಯು ಕಸದ ಕೊಂಪೆಯಾಗಿ ಬಿಟ್ಟಿದೆ.
ವಾಹನ ಸವಾರರು ಎಸೆಯುವ ಕಸ ಒಂದೆಡೆಯಾದರೆ, ಸಭೆ ಸಮಾರಂಭಗಳ ಕಸವನ್ನೂ ಇಲ್ಲಿ ಸುರಿಯುತ್ತಿದ್ದಾರೆ. ಇನ್ನು ಮನೆ ದುರಸ್ತಿ ಮಾಡಿದ ಹಳೆ ಮನೆಯ ತ್ಯಾಜ್ಯದ ರಾಶಿ ಎರಡು ಪಟ್ಟಿದೆ. ಸರಕಾರಿ ಜಾಗ ಇದಾಗಿರುವುದರಿಂದ ಯಾರ ಭಯವೂ ಇಲ್ಲದೆ ಇಲ್ಲಿ ಕಸ ವಿಲೇವಾರಿಯಾಗುತ್ತಿದೆ. ತ್ಯಾಜ್ಯ ರಾಶಿಯಲ್ಲಿ ಪ್ಲಾಸ್ಟಿಕ್, ಬಾಟಲಿಗಳೇ ಎದ್ದು ಕಾಣುತ್ತಿವೆ. ಸಾಧಾರಣ ಮಟ್ಟಿಗೆ ಈ ತ್ಯಾಜ್ಯ ಗುಡ್ಡೆಗಳನ್ನು ವಿಲೇವಾರಿ ಮಾಡಲು ಜೆಸಿಬಿ ಯಂತ್ರಗಳೇ ಅನಿವಾರ್ಯವಾಗಿದೆ. ಈ ಭಾಗದಲ್ಲಿ ತ್ಯಾಜ್ಯ ರಾಶಿ ಎಸೆಯುವವರ ವಿರುದ್ಧ ಸಂಬಂಧಪಟ್ಟ ಇಲಾಖೆ ಎಚ್ಚರಿಕೆಯ ಫಲಕ ಅಳವಡಿಸಿ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕಾಗಿದೆ.
ಮಂಗಳೂರು, ಉಡುಪಿಯಿಂದ ಬರುವ ಬರುವ ಬಸ್‌ಗಳಿಗೆ ಬೃಹತ್ ಬಸ್ ನಿಲ್ದಾಣ ಮಾಡಲು ಈ ಜಾಗ ಪ್ರಶಸ್ತವಾಗಿದೆ. ಜಿಲ್ಲಾ ಧಿಕಾರಿಗಳ ಜತೆ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹರಿನಾಥ್ ಸಹಿತ ನಮ್ಮ ನಿಯೋಗ ಜಂಟಿ ಪರಿಶೀಲನೆ ನಡೆಸಿದೆ. ಅರಣ್ಯ ಇಲಾಖೆಯ ಅಧೀನದಲ್ಲಿರುವ ಈ ಭೂಮಿಯನ್ನು ಪಾಲಿಕೆಗೆ ಹಸ್ತಾಂತರಿಸುವಂತೆ ಅರಣ್ಯ ಸಚಿವ ರಮಾನಾಥ ರೈ ಅವರಿಗೂ ಮನವಿ ಮಾಡಲಾಗಿದೆ
Click this button or press Ctrl+G to toggle between Kannada and English