ಮಂಗಳೂರು : ಏಕರೂಪದ ಮರಳು ನೀತಿಯನ್ನು ಕೈಬಿಟ್ಟು ಕರಾವಳಿ ಭಾಗದ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿ, ನಾಳೆಯಿಂದಲೇ ಮರಳು ಸಾಗಾಟದ ಲಾರಿಗಳನ್ನು ರಸ್ತೆಯಲ್ಲಿ ಸಂಚರಿಸಲು ಬಿಡುವುದಿಲ್ಲ ಎಂದು ಪುತ್ತೂರಿನ ಸಾರ್ವಜನಿಕ ಹಿತರಕ್ಷಣಾ ಸಮಿತಿ ಮುಖಂಡ ಅರುಣ್ ಕುಮಾರ್ ಪುತ್ತಿಲ ರಾಜ್ಯಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಮರಳು ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ಜನವಿರೋಧಿ ನೀತಿ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಶನಿವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ವ್ಯವಸ್ಥೆಯಡಿಯಲ್ಲಿ ಮನೆ ನಿರ್ಮಿಸುವ ಬಡವರಿಗೆ, ದುಡಿದು ಬದುಕುವ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಮರಳು ನೀತಿ ಜಾರಿಗೊಳಿಸಬೇಕಾಗಿದ್ದ ರಾಜ್ಯ ಸರ್ಕಾರ ಸಚಿವರುಗಳ ಜೇಬು ತುಂಬಿಸುವ ಉದ್ಯಮಿಗಳ ಜೊತೆ ಶಾಮೀಲಾಗಿ ಕೃತಕ ಮರಳು ಅಭಾವ ಸೃಷ್ಟಿಸುವ ಮೂಲಕ ಮರಳು ಹಗರಣ ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಚುನಾವಣೆಗೆ ಹಣ ಜೋಡಿಸುವ ಕೆಲಸ ಕರಾವಳಿ ಭಾಗದ ಈ ಮರಳು ಮಾಫಿಯಾದಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಭಜರಂಗದಳ ಮಂಗಳೂರು ವಿಭಾಗದ ಗೋರಕ್ಷಕ್ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಮುಂದಿನ ಶನಿವಾರದೊಳಗೆ ಮರಳು ನೀತಿಯನ್ನು ಸರಿಪಡಿಸದಿದ್ದರೆ 100 ಲಾರಿಗಳನ್ನು ಹಾಗೂ ಜನರನ್ನು ಕರೆದೊಯ್ದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Click this button or press Ctrl+G to toggle between Kannada and English