ನವದೆಹಲಿ: ಹಿಂದೂಗಳ ಪವಿತ್ರ ನದಿ ಗಂಗಾನದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಿದ್ದ ಯುವಕನೋರ್ವ ಭರ್ತಿ 42 ದಿನಗಳ ಕಾಲ ಜೈಲುಪಾಲದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಜಾಕಿರ್ ಅಲಿ ತ್ಯಾಗಿ ಎಂಬ ಯುವಕ ಗಂಗಾನದಿ ಕುರಿತಂತೆ ಅಪಹಾಸ್ಯ ಮಾಡಿದ್ದ. ಗಂಗೆಯನ್ನು ‘ಜೀವಂತ ಧಾರ್ಮಿಕ ಅಸ್ತಿತ್ವ’ ಎನ್ನುವ ಕೇಂದ್ರ ಸರ್ಕಾರ ರಾಮಮಂದಿರನ್ನು ಕಟ್ಟಿ ತೀರುತ್ತೇವೆ ಎಂದು ಹೇಳುತ್ತದೆ. ಆದರೆ ಇಲ್ಲಿಯವರೆಗೂ ಏರ್ ಇಂಡಿಯಾದ ಹಜ್ ಸಬ್ಸಿಡಿಯನ್ನು ಮಾತ್ರ ಏಕೆ ಹಿಂಪಡೆದಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಬರೆದುಕೊಂಡಿದ್ದ.
ಯುವಕ ಈ ಟ್ವೀಟ್ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಯುವಕ ಜಾಕಿರ್ ಅಲಿ ತ್ಯಾಗಿ ಮುಜಾಫರ್ ನಗರದಲ್ಲಿ ಕಬ್ಬಿಣ ರಫ್ತು ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಇದರ ಬೆನ್ನಲ್ಲೇ ಕಳೆದ 42 ದಿನಗಳ ಹಿಂದೆ ಉತ್ತರ ಪ್ರದೇಶ ಪೊಲೀಸರು ಮುಜಾಫರ್ ನಗರದಲ್ಲಿ ಈತನನ್ನು ಸಾಮಾನ್ಯ ವಿಚಾರಣೆ ಎಂದು ಠಾಣೆಗೆ ಕರೆದೊಯ್ದಿದ್ದರು. ಬಳಿಕ ಈತನ ವಿರುದ್ಧ ಐಪಿಸಿ ಸೆಕ್ಷನ್ 420 (ಮೋಸ), ಮಾಹಿತಿ ತಂತ್ರಜ್ಞಾನ ಕಾಯಿದೆ 66ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಯುವಕನ ಬಂಧನ ವಿಚಾರ ವ್ಯಾಪಕ ಸುದ್ದಿಗೆ ಕಾರಣವಾಗುತ್ತಿದ್ದಂತೆಯೇ ಈತನ ಪರ ವಕೀಲರಾದ ಖಾಜಿ ಅಹ್ಮದ್ ಅವರು ಆತನಿಗೆ ಜಾಮೀನು ನೀಡಿ ಬಿಡಿಸಿಕೊಂಡರು.
ಅದರ ಬಳಿಕವೂ ಈತನ ಬೆನ್ನು ಬಿಡದ ಪೊಲೀಸರು ಐಪಿಸಿ ಸೆಕ್ಷನ್ 124 ಎ (ದೇಶದ್ರೋಹ) ಅಡಿಯಲ್ಲಿ ಪ್ರಕರಣ ದಾಖಸಿಕೊಂಡಿದ್ದರು ಎಂದು ಯುವಕನ ಪರ ವಕೀಲರಾದ ಖಾಜಿ ಅಹ್ಮದ್ ಹೇಳಿದ್ದಾರೆ. ಪ್ರಸ್ತುತ ಯುವಕನ ಪ್ರಕರಣವನ್ನು ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಡಾ.ಕೊಲಿನ್ ಗಾನ್ ಸಾಲ್ವ್ಸ್ ಅವರ ನೇತೃತ್ವದ ಭೀಮ್ ಆರ್ಮಿ ಡಿಫೆನ್ಸ್ ರಕ್ಷಣಾ ಸಮಿತಿ ಸಂಘಟನೆ ಮೇಲ್ವಿಚಾರಣೆ ಮಾಡುತ್ತಿದ್ದು, ಸಂತ್ರಸ್ಥ ಯುವಕನ ನೆರವಿಗೆ ಧಾವಿಸಿದ್ದಾರೆ. ಪ್ರೆಸ್ ಕ್ಲಬ್ ಆಫ್ ದೆಹಲಿಯಲ್ಲಿ ಸಂತ್ರಸ್ತ ಯುವಕ ಜಾಕಿರ್ ಅಲಿ ತ್ಯಾಗಿ ತನ್ನ 42 ದಿನಗಳ ಜೈಲು ವಾಸವನ್ನು ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
“ಕಳೆದ ಏಪ್ರಿಲ್ 2ರ ರಾತ್ರಿ ನನ್ನನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಪೊಲೀಸ್ ಅಧಿಕಾರಿಗಳು ಸಣ್ಣ ವಿಚಾರಣೆ ಇದೆ. ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿ ಕರೆದೊಯ್ದರು. ಆದರೆ ಠಾಣೆಗೆ ಹೋದ ಬಳಿಕ ಪೊಲೀಸರು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಂತೆಯೇ ಮನಸೋ ಇಚ್ಛೆ ಥಳಿಸಿದರು. ಪೊಲೀಸರು ನನ್ನನ್ನು ಓರ್ವ ಭಯೋತ್ಪಾಕ ಎಂದು ನಿಂದಿಸುತ್ತಿದ್ದರು. ಅಂತೆಯೇ ನನ್ನ ವೈದ್ಯಕೀಯ ಪರೀಕ್ಷೆಯ ವರದಿಗಳನ್ನೂ ಕೂಡ ತಿರುಚಿ ನನ್ನ ಬಂಧನಕ್ಕೆ ಅಗತ್ಯವಿರುವ ಎಲ್ಲ ಅಂಶಗಳನ್ನೂ ಸೇರಿಸಿಕೊಂಡರು. ಜೈಲಿನಲ್ಲಿ ನರಕ ತೋರಿಸಿದ ಪೊಲೀಸರು ವಾಶ್ ರೂಂಗೆ ತೆರಳಿದರೂ ಹಣ ಕೀಳುತ್ತಿದ್ದರು ಎಂದು ಹೇಳಿಕೊಂಡಿದ್ದಾನೆ.
ಪ್ರಸ್ತುತ ಯುವಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಕಬ್ಬಿಣ ರಫ್ಥು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಿಂಗಳಿಗೆ 8 ಸಾವಿರ ರು. ಸಂಬಳ ಪಡೆಯುತ್ತಿದ್ದನಂತೆ, ಈ ಪ್ರಕರಣದ ಬಳಿಕ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈ ಬಗ್ಗೆ ಸಂಸ್ಥೆಯನ್ನು ಕೇಳಿದರೆ ಜಿಎಸ್ ಟಿ ಜಾರಿ ಬಳಿಕ ಸಂಸ್ಥೆ ಮೇಲೆ ಬಿದ್ದಿರುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಸಂಬಂಧ ಕೆಲ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಿದ್ದಾರೆ. ಯುವಕ ಮೀರತ್ ನ ಸ್ವಾಮಿ ವಿವೇಕಾನಂದ ಸುಭಾರ್ತಿ ವಿವಿಯಲ್ಲಿ ಕರೆಸ್ಪಾಂಡೆನ್ಸ್ ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಇದೀಗ ಆತನ ಶಿಕ್ಷಣಕ್ಕೂ ತೊಂದರೆಯಾಗಿದೆ.
Click this button or press Ctrl+G to toggle between Kannada and English