ಅಣ್ಣಾ ಅಂದದ್ದೇ ಸೈ : ಒಮ್ಮತದ ಲೋಕಪಾಲಗೆ ಇಂದು ನಿರ್ಣಯ

2:24 PM, Friday, August 26th, 2011
Share
1 Star2 Stars3 Stars4 Stars5 Stars
(No Ratings Yet)
Loading...

Anna-Hazare

ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು,ಅವರ ಆರೋಗ್ಯ ಕ್ಷಿಣಿಸುತ್ತಿದೆ. ಆದರೂ ಸ್ಥಿರವಾಗಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದಾರೆ. ರಕ್ತ ಮಾದರಿ ಪರೀಕ್ಷೆಯಿಂದ ಅಣ್ಣಾ ಆರೋಗ್ಯ ಉತ್ತಮವಾಗಿದೆ. ಆದರೆ ಅವರ ದೇಹ ತೂಕ ಆರು ಕೆ.ಜಿ.ಯಷ್ಟು ಕಡಿಮೆ ಆಗಿದೆ.ಇದು ಆತಂಕಕ್ಕೆ ಕಾರಣವಾದ ಅಂಶ ಎಂದು ಅಣ್ಣಾ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಖ್ಯಾತ ಹೃದ್ರೋಗ ತಜ್ಞ ನರೇಶ್ ಟ್ರೆಹಾನ್ ತಿಳಿಸಿದರು.

ಅಣ್ಣಾ ಆರು ಲೀಟರ್ ನೀರು ಕುಡಿದಿದ್ದು, ಇದು ರಕ್ತದಲ್ಲಿನ ಕೆಟೊನ್ ಪ್ರಮಾಣವನ್ನು ಸಮಸ್ಥಿತಿಯಲ್ಲಿಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ.
ಗುರುವಾರ ನಡೆದ ಬಿರುಸಿನ ಚಟುವಟಿಕೆಗಳು ಹಾಗೂ ಕೊಡು-ಕೊಳ್ಳುವ ವಿಷಯದಲ್ಲಿ ಅಣ್ಣಾ ತಂಡ ಮತ್ತು ಸರ್ಕಾರ ಮುಕ್ತ ಮನಸ್ಸು ಮತ್ತು ಉದಾರತೆ ತೋರಿದ ಫಲಶ್ರುತಿಯಾಗಿ ಬಿಕ್ಕಟ್ಟು ಇತ್ಯರ್ಥವಾಗುವ ಹಂತಕ್ಕೆ ಬಂದಿದೆ. ಜನಲೋಕಪಾಲ ಮಸೂದೆ ಜಾರಿ ಕುರಿತಂತೆ ಸಂಸತ್ತಿನಲ್ಲಿ ಅಂಗೀಕಾರವಾಗಲಿರುವ ನಿರ್ಣಯದ ಪ್ರತಿ ಸಿದ್ಧವಾಗಿದ್ದು, ಅದನ್ನು ಅಣ್ಣಾ ಅವರಿಗೆ ತಡರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಕೇಂದ್ರ ಸಚಿವ ವಿಲಾಸ್ ರಾವ್ ದೇಶ್‌ಮುಖ್ ತಲುಪಿಸಲಿದ್ದಾರೆ.

ಶುಕ್ರವಾರ ಸಂಸತ್ತಿನಲ್ಲಿ ಅಣ್ಣಾ ಜನಲೋಕಪಾಲ, ಸರ್ಕಾರದ ಲೋಕಪಾಲ, ಅರುಣಾ ರಾಯ್, ಲೋಕ ಸತ್ತಾ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ಅವರು ರೂಪಿಸಿರುವ ಲೋಕಪಾಲ ಮಸೂದೆಯನ್ನು ಚರ್ಚಿಸಲಾಗುತ್ತದೆ. ಚರ್ಚೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿವೆ.

ಸಂಸತ್ತಿನಲ್ಲಿ ಅಂಗೀಕರಿಸುವ ನಿರ್ಣಯದ ಕರಡು ಪ್ರತಿಯನ್ನು ತೋರಿಸುವಂತೆ ಅಣ್ಣಾ ತಂಡ ಒತ್ತಾಯಿಸಿದ್ದು,ತಡ ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಪ್ರತಿಯನ್ನು ಅಣ್ಣಾಗೆ ಸಲ್ಲಿಸುವ ನಿರೀಕ್ಷೆ ಇದೆ. ಅಣ್ಣಾ ಎತ್ತಿರುವ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡ ಪ್ರಬಲ, ಪರಿಣಾಮಕಾರಿ ಲೋಕ ಪಾಲ ಮಸೂದೆ ಜಾರಿಗೆ ತರುವ ಕುರಿತಾದ ನಿರ್ಣಯವನ್ನು ಸಂಸತ್ತು ಅಂಗೀಕರಿಸಲಿದೆ.

ಶುಕ್ರವಾರವೇ ಚರ್ಚೆ ಮುಗಿದರೆ ಸಂಜೆ ವೇಳೆಗೆ ಅಥವಾ ಶನಿವಾರವೂ ಸಂಸತ್ತು ಅಧಿವೇಶನ ನಡೆಸಿ ಚರ್ಚಿಸಿದ ನಂತರ ನಿರ್ಣಯ ಅಂಗೀಕರಿಸಲಾಗುತ್ತದೆ.

ಇದುವರೆಗೆ ಸಹಮತಕ್ಕೆ ಬಾರದ, ಅಣ್ಣಾ ಟೀಮ್ ಎತ್ತಿರುವ ಮೂರು ಅಂಶ-ಸರ್ಕಾರಿ ಕಚೇರಿ ಗಳಲ್ಲಿ ನಾಗರಿಕ ಸನ್ನದು ರಚಿಸಬೇಕು, ಕೆಳಹಂತದ ಅಧಿಕಾರಿಗಳನ್ನು ಲೋಕಪಾಲ ವ್ಯಾಪ್ತಿಗೆ ತರಬೇಕು ಮತ್ತು ಕೇಂದ್ರ ಹಾಗೂ ರಾಜ್ಯಗಳಲ್ಲಿ ಏಕರೂಪ ಲೋಕಪಾಲ ಕಾನೂನು ಜಾರಿಯಾಗ ಬೇಕು ಎಂಬುದನ್ನು ಪರಿಗಣಿಸಲು ಒಪ್ಪಿದೆ.

ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ಅಣ್ಣಾ ಅವರಿಗೆ ಉಪವಾಸ ಕೈಬಿಡಿ ಎಂದು ಮನವಿ ಮಾಡಿದರು. ಭ್ರಷ್ಟಾಚಾರ ತಡೆಯುವ ಬಗ್ಗೆ ನಿಮ್ಮ ಕಾಳಜಿ ಉದಾತ್ತವಾದುದು. ನೀವು ನಿಮ್ಮ ಕೆಲಸ ಮಾಡಿ ದ್ದೀರಿ, ನಿಮಗೆ ನಾನು ವೈಯಕ್ತಿಕವಾಗಿ ನಮಿಸುತ್ತೇನೆ. ಅಷ್ಟೇ ಅಲ್ಲ ಇಡೀ ದೇಶವೇ ನಮಿಸುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ.ಈ ಕೂಡಲೇ ದಯವಿಟ್ಟು ನಿಮ್ಮ ಉಪವಾಸ ನಿಲ್ಲಿಸಿ. ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಬಹುದು ಎಂದು ಮನವಿ ಮಾಡಿದರು. ಲೋಕಸಭೆಯಲ್ಲಿ ಪ್ರಧಾನಿ ಮನವಿ ಮಾಡಿದ ನಂತರ ಇತ್ತ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ವಿಲಾಸ್ ರಾವ್ ದೇಶ್‌ಮುಖ್ ಅವರು ರಾಮ್‌ಲೀಲಾ ಮೈದಾನದಲ್ಲಿ ಅಣ್ಣಾ ಅವರನ್ನು ಭೇಟಿ ಮಾಡಿ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ನಾನು ಪ್ರಧಾನಿಗೆ ಸಂದೇಶ ರವಾನಿಸಿದ್ದೇನೆ. ನನ್ನ ಮೂರು ಬೇಡಿಕೆ ಗಳನ್ನು ಈಡೇರಿಸುವುದಾರೆ ಉಪವಾಸ ಕೈಬಿಡುತ್ತೇನೆ. ನಾಗರಿಕ ಸನ್ನದು, ಎಲ್ಲಾ ರಾಜ್ಯಗಳಲ್ಲೂ ಲೋಕಾಯುಕ್ತ ರಚನೆ ಮತ್ತು ಕೆಳ ಹಂತದ ಅಧಿಕಾರಿಗಳನ್ನು ಲೋಕಾಪಾಲ ವ್ಯಾಪ್ತಿಗೆ ತರಬೇಕು- ಈ ಮೂರು ಅಂಶಗಳನ್ನು ಒಪ್ಪಿದರೆ, ನಾನು ಉಪವಾಸ ಕೈಬಿಡುತ್ತೇನೆ. ಆದರೆ, ಇದೇ ಜಾಗದಲ್ಲಿ ಪ್ರತಿಭಟನೆ ಮುಂದುವರಿಯುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದೇನೆ. ನನ್ನ ಹೋರಾಟದ ಬಗ್ಗೆ ಪ್ರಧಾನಿ ಮತ್ತು ಸ್ಪೀಕರ್ ಅಭಿನಂದಿಸಿದ್ದಾರೆ. ಆ ಅಭಿನಂದನೆ ನನಗೆ ಸಲ್ಲಬೇಕಿಲ್ಲ, ಅದು ನಿಮ್ಮೆಲ್ಲರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.

ಅಣ್ಣ ಉಪವಾಸ ಆರಂಭಿಸುವ ಹೊತ್ತಿಗೆ ಟೀಕಿಸಿದ್ದ ತಿವಾರಿ, ಇದುವರೆಗೂ ಸುಮ್ಮನಿದ್ದು, ಕೊನೆಗೆ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಅಣ್ಣಾ ಕ್ಷಮೆ ಯಾಚಿಸಿದ್ದಾರೆ. ಅಣ್ಣಾ ವಿರುದ್ಧ ವೈಯಕ್ತಿಕ ದಾಳಿ ನಡೆಸಬಾರದು ಎಂಬ ಸೂಚನೆಯನ್ನು ಆರಂಭದಲ್ಲೇ ರಾಹುಲ್ ಗಾಂಧಿ ನೀಡಿದ್ದರು. ಅದಾದ ನಂತರ ತಿವಾರಿ ಅಣ್ಣಾ ತಂಟೆಗೆ ಹೋಗಿರಲಿಲ್ಲ.

ಯಾರೂ ಚಿಂತೆ ಪಡಬೇಕಾದ ಅಗತ್ಯವಿಲ್ಲ. ದೇವರ ದಯೆ ಹಾಗೂ ನಿಮ್ಮೆಲ್ಲರ ಭಾರಿ ಬೆಂಬಲದ ಪರಿಣಾಮ ನಾನು ಆರೋಗ್ಯವಾಗಿದ್ದೇನೆ. ಲೋಕಪಾಲ ಮಸೂದೆ ಜಾರಿಯಾಗುವವರೆಗೂ ನಾನು ಸಾಯುವುದಿಲ್ಲ.ಸಂಸತ್ತಿನಲ್ಲಿ ನಾನು ಹೇಳಿರುವ ಜನಲೋಕಪಾಲದ 3 ಅಂಶಗಳ ಬಗ್ಗೆ ಶುಕ್ರವಾರದಿಂದಲೇ ಚರ್ಚೆ ಶುರುವಾಗಲಿ. ಆ ಬಳಿಕವಷ್ಟೇ ಉಪವಾಸ ಕೊನೆಗೊಳಿಸುವ ಬಗ್ಗೆ ನಿರ್ಧರಿಸುತ್ತೇನೆ.

ನಾಗರಿಕ ಸಮಿತಿಯ ಜನ ಲೋಕಪಾಲ ಮಸೂದೆಯನ್ನು ಪ್ರಧಾನವಾಗಿಸಿಕೊಂಡು ಈ ಸಂಬಂಧದ ನಾಲ್ಕು ಮಸೂದೆಗಳ ಕುರಿತು ಸಂಸತ್ತಿನಲ್ಲಿ ಶುಕ್ರವಾರ ಚರ್ಚೆ ಆರಂಭಿಸುವುದಾಗಿ ಸರ್ಕಾರ ಪ್ರಕಟಿಸಿದೆ.ಈ ಹಿನ್ನೆಲೆಯಲ್ಲಿ ಆ.16ರಿಂದ ಉಪವಾಸ ಕುಳಿತಿರುವ 74ವರ್ಷದ ಮುಂದಾಳು ಅಣ್ಣಾ ಹಜಾರೆ ಉಪವಾಸ ಶುಕ್ರವಾರ ಕೊನೆಯಾಗುವ ನಿರೀಕ್ಷೆ ಇದೆ.

`ಸರ್ಕಾರಕ್ಕೆ ಪ್ರಬಲ ಮಸೂದೆ ತರುವ ಇಚ್ಛೆ ಇದ್ದರೆ ಶುಕ್ರವಾರವೇ ಸದನದಲ್ಲಿ ಚರ್ಚೆ ಆರಂಭಿಸಲಿ. ನಾವು ಒತ್ತಿ ಹೇಳುತ್ತಿರುವ ಮೂರು ಪ್ರಮುಖ ಅಂಶಗಳನ್ನು ಮಸೂದೆಯಲ್ಲಿ ಅಡಕಗೊಳಿಸುವ ಬಗ್ಗೆ ನಿರ್ಣಯ ಅಂಗೀಕರಿಸಿದ ನಂತರವಷ್ಟೇ ಉಪವಾಸ ಕೊನೆಗೊಳಿಸುವ ಮಾತು` ಎಂದು ಅಣ್ಣಾ ಸ್ಪಷ್ಟಪಡಿಸಿದ್ದಾರೆ.

ಕೆಳ ಹಂತದ ಅಧಿಕಾರಿಗಳನ್ನು ಲೋಕಪಾಲ ವ್ಯಾಪ್ತಿಗೆ ಒಳಪಡಿಸಬೇಕು. ಎಲ್ಲ ರಾಜ್ಯಗಳಲ್ಲೂ ಲೋಕಾಯುಕ್ತ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರತಿಯೊಂದು ಇಲಾಖೆಯ ಪ್ರತಿ ಕೆಲಸಕ್ಕೆ ಸಮಯದ ಗಡುವು ನಿಗದಿಪಡಿಸಿ ಅದನ್ನು ಕಚೇರಿಗಳ ಮುಂದೆ ಪ್ರದರ್ಶಿಸಬೇಕು- ಇವು ನಾಗರಿಕ ಸಮಿತಿಯ ಮೂರು ಪ್ರಮುಖ ಬೇಡಿಕೆಗಳಾಗಿವೆ.

ಈ ಮುನ್ನ ಪ್ರಧಾನಿ ದೂತರಾಗಿ ಗುರುವಾರ ಎರಡು ಬಾರಿ ಅಣ್ಣಾ ಅವರನ್ನು ಭೇಟಿಯಾದ ಕೇಂದ್ರ ಸಚಿವ ಹಾಗೂ ವಿಲಾಸ್‌ರಾವ್ ದೇಶ್‌ಮುಖ್ ಸದನ ಆರಂಭವಾಗುವ ಮುನ್ನ ಅವರನ್ನು ಮತ್ತೊಮ್ಮೆ ಭೇಟಿಯಾಗುತ್ತಾರೆ ಎನ್ನಲಾಗಿದೆ. ಮತ್ತೊಂದೆಡೆ ಅಣ್ಣಾ ಬಳಗದ ಪ್ರಮುಖರು ಪ್ರಮುಖ ಪ್ರತಿಪಕ್ಷ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿ ಹಲವರನ್ನು ರಾತ್ರಿ ಭೇಟಿಯಾಗಿ ಚರ್ಚಿಸಿದರು. ಜನ ಲೋಕಪಾಲ ಮಸೂದೆಯಯನ್ನು ಬೆಂಬಲಿಸುವುದಾಗಿ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆ ಜಾರಿಗೆ ಬರಬೇಕು ಎಂಬ ನಾಗರಿಕ ಸಮಿತಿ ಪಟ್ಟು ಹಾಕಿದ್ದರೆ,`ಲೋಕಾಯುಕ್ತ ರಚನೆ ರಾಜ್ಯಕ್ಕೆ ಸಂಬಂಧಪಟ್ಟ ವಿಷಯ. ರಾಜ್ಯದ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ತನಗೆ ಅಧಿಕಾರವಿಲ್ಲ` ಎಂದು ಕೇಂದ್ರ ಹೇಳುತ್ತಿದೆ.

ಸರ್ಕಾರದ ಸಿ ಮತ್ತು ಡಿ ವರ್ಗದ ನೌಕರರನ್ನು ಲೋಕಪಾಲದ ವ್ಯಾಪ್ತಿಗೆ ತರಬೇಕೆಂಬುದು ಅಣ್ಣಾ ತಂಡದ ಮತ್ತೊಂದು ಪಟ್ಟು. ಆದರೆ,ಕೇಂದ್ರ ಮತ್ತು ರಾಜ್ಯಗಳಲ್ಲಿ 1.४ ಕೋಟಿಯಷ್ಟು ಇರುವ ನೌಕರರನ್ನು ಮಸೂದೆ ವ್ಯಾಪ್ತಿಗೆ ತರುವುದು ಕಷ್ಟದ ಮಾತು. ಇದಕ್ಕೆ ಬೇರೆ ಪರ್ಯಾಯ ಏನು ಎಂಬ ಬಗ್ಗೆ ಚಿಂತಿಸಬಹುದೆಂದು ಸರ್ಕಾರ ಹೇಳುತ್ತಿದೆ. ಅಲ್ಲದೆ,ಎಲ್ಲ ಇಲಾಖೆಗಳಿಗೂ ಜನರ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಬೇಕೆಂಬ ಷರತ್ತು ಅಣ್ಣಾ ತಂಡದ್ದು. ಇದು ಆಗದ ಕೆಲಸ ಎಂಬುದು ಸರ್ಕಾರದ ವಾದ. ಈ ಮೂರು ಅಂಶಗಳನ್ನು ಉಭಯ ಬಣಗಳು `ಪ್ರತಿಷ್ಠೆ ಪ್ರಶ್ನೆ` ಮಾಡಿಕೊಂಡಿರುವುದರಿಂದ ಬಿಕ್ಕಟ್ಟು ಮುಂದುವರಿದಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English