ಅಲಹಾಬಾದ್: ಆರುಷಿ-ಹೇಮರಾಜ್ ಜೋಡಿ ಕೊಲೆ ಪ್ರಕರಣದಲ್ಲಿ ದಂತ ವೈದ್ಯ ದಂಪತಿ ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಅವರನ್ನು ಅಲಹಾಬಾದ್ ಹೈ ಕೋರ್ಟ್ ನಿರ್ದೋಷಿಗಳೆಂದು ಪರಿಗಣಿಸಿ, ತೀರ್ಪು ನೀಡಿದೆ.
2008 ಮೇನಲ್ಲಿ ನಡೆದ ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ವಿಚಾರಣಾ ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿ, ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ತಲ್ವಾರ್ ದಂಪತಿ ವಿರುದ್ಧದ ಸಾಕ್ಷಿಗಳು ದುರ್ಬಲವಾಗಿದೆ ಎಂದಿರುವ ಹೈ ಕೋರ್ಟ್, ನಿರ್ದೋಷಿಗಳೆಂದು ಘೋಷಿಸಿದೆ.
ಇದೊಂದು ಕ್ರೂರ ಕೊಲೆ. ದೋಷಿಗಳಿಗೆ ಮರಣ ದಂಡನೆ ನೀಡಬೇಕು,’ ಎಂದು ಸಿಬಿಐ ವಾದಿಸಿ, ದಂಪತಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ತಲ್ವಾರ್ ದಂಪತಿ ಗಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿ ತಮ್ಮ ಶಿಕ್ಷೆಯನ್ನು ಅನುಭವಿಸುತ್ತಿದ್ದರು. 14 ವಸಂತಗಳನ್ನು ಪೂರೈಸಲು ಇನ್ನು ಎಂಟು ದಿನಗಳಿರುವಾಗ ಸ್ವಂತ ಮಗಳು ಆರುಷಿ ಹಾಗೂ ಮನೆಕೆಲಸದಾಳನ್ನು ಕೊಂದ ಆರೋಪಕ್ಕೆ ತಲ್ವಾರ್ ದಂಪತಿ ತುತ್ತಾಗಿದ್ದರು. ‘ಮಕ್ಕಳಿಗೆ ನಿಜವಾದ ರಕ್ಷಣೆ ದೊರೆಯುವುದು ಅವರ ಪೋಷಕರಿಂದ. ಇದು ಮನುಷ್ಯ ಸಹಜ ಗುಣ. ಆದರೆ, ತಲ್ವಾರ್ ದಂಪತಿ ಇದಕ್ಕೆ ಹೊರತಾಗಿದ್ದಾರೆ. ತಮ್ಮ ವಂಶದ ಕುಡಿಯನ್ನು ಪೋಷಕರೇ ಹಿಸುಕಿ ಹಾಕಿದ್ದಾರೆ,’ ಎಂದು ಗಜಿಯಾಬಾದ್ ಸಿಬಿಐ ನ್ಯಾಯಲಯ ತೀರ್ಪು ನೀಡುವಾಗ ಹೇಳಿತ್ತು.
ಮೇ 15-16, 2013ರಲ್ಲಿ ತನ್ನ ಬೆಡ್ ರೂಮಿನಲ್ಲಿ ಆರುಷಿ ಕತ್ತು ಹಿಸುಕಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಕೊಲೆಗೆ ಮನೆ ಕೆಲಸದಾಳು ಹೇಮರಾಜ್ ಕಾರಣವೆಂದು ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ, ಆತನೂ ಎರಡು ದಿನಗಳ ನಂತರ ಟೆರಾಸ್ ಮೇಲೆ ಶವವಾಗಿ ಪತ್ತೆಯಾಗಿದ್ದು, ಪ್ರಕರಣ ರೋಚಕ ತಿರುವು ಪಡೆದುಕೊಂಡಿತ್ತು. 2014ರಲ್ಲಿ ತಲ್ವಾರ್ ದಂಪತಿ ವಿಚಾರಣಾಧೀನ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ, ಅಲಹಾಬಾದ್ ಹೈ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೋರ್ಟ್, ಸಿಬಿಐ ಸೂಕ್ತ ತನಿಖೆ ನಡೆಸುವಲ್ಲಿ ವಿಫಲವಾಗಿದೆ, ಎಂದು ಹೇಳಿದ್ದು, ತಲ್ವಾರ್ ದಂಪತಿಯನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ.
Click this button or press Ctrl+G to toggle between Kannada and English