ನವದೆಹಲಿ: ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕಾಲವಕಾಶ ನೀಡಿರುವ ಸುಪ್ರೀಂ ಕೋರ್ಟ್, ನವೆಂಬರ್ 21ರ ಮುಂದಿನ ವಿಚಾರಣೆವರೆಗೂ ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಗಡಿಪಾರು ಮಾಡದಂತೆ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರ ಗಡಿಪಾರು ವಿಷಯಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದ್ದು, ಮಾನವೀಯ ಮೌಲ್ಯಗಳು ನಮ್ಮ ಸಂವಿಧಾನದ ಆಧಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಮುಗ್ಧ ಮಕ್ಕಳು ಮತ್ತು ಮಹಿಳೆಯರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ ವಿಚಾರಣೆವರೆಗೂ ರೋಹಿಂಗ್ಯಾ ಮುಸ್ಲಿಮರ ಗಡಿಪಾರು ಬಗ್ಗೆ ನಿರ್ಧಾರ ಬೇಡ ಎಂದು ತಾಕೀತು ಮಾಡಿರುವ ಸುಪ್ರೀಂಕೋರ್ಟ್ ನವೆಂಬರ್ 21ಕ್ಕೆ ವಿಚಾರಣೆ ಮುಂದೂಡಿದೆ.
ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಾರದು ಎಂದು ಕೇಂದ್ರ ಸರ್ಕಾರ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು. ಅಲ್ಲದೆ ಗುಪ್ತಚರ ಮಾಹಿತಿಯ ಪ್ರಕಾರ, ರೋಹಿಂಗ್ಯಾ ಮುಸ್ಲಿಮರು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಆ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರ, ದೆಹಲಿ, ಹೈದರಾಬಾದ್ ಹಾಗೂ ಮೇವಾತ್ ನಲ್ಲಿ ಸಕ್ರಿಯವಾಗಿವೆ ಎಂದು ತಿಳಿಸಿತ್ತು.
Click this button or press Ctrl+G to toggle between Kannada and English