ಮಂಗಳೂರು: ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ನಲ್ಲಿ ಏಕಕಾಲದಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸಬೇಕಿದ್ದ ಚುನಾವಣಾ ಆಯೋಗವು ಎನ್‌ಡಿಎ ಸರಕಾರದ ಜತೆ ಶಾಮೀಲಾಗಿರುವುದರಿಂದ ಗುಜರಾತ್‌ನಲ್ಲಿ ಬಿಜೆಪಿಗೆ ರಾಜಕೀಯ ತಂತ್ರಗಾರಿಕೆಗೆ ಅವಕಾಶ ನೀಡುವ ಸಲುವಾಗಿ ದಿನಾಂಕವನ್ನು ಪ್ರಕಟಿಸದೆ ತಾರತಮ್ಯವೆಸಗಿದೆ ಎಂದರು. ಗುಜರಾತ್‌ನಲ್ಲಿ ಬಿಜೆಪಿಗೆ ಸೋಲಿನ ಭೀತಿ ಆವರಿಸಿರುವುದರಿಂದ ಚುನಾವಣಾ ತಂತ್ರಗಾರಿಕೆಗೆ ಸಮಯಾವಕಾಶ ಒದಗಿಸಲು ಅನುಕೂಲವಾಗುವಂತೆ ಆಯೋಗ ಅನುವು ಮಾಡಿಕೊಟ್ಟಿದೆ ಎಂದು ದೂರಿದರು.
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 100ನೇ ಸ್ಥಾನಕ್ಕೆ ಕುಸಿದಿರುವುದುದು ಆಘಾತಕಾರಿ ವಿಚಾರ. ಹಿಂದೆ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಈ ಸೂಚ್ಯಂಕದಲ್ಲಿ ಭಾರತ 55ನೆ ಸ್ಥಾನದಲ್ಲಿತ್ತು. ಆದರೆ ಎನ್‌ಡಿಎ ಸರಕಾರದ ಅವಧಿಯಲ್ಲಿ ಇದೀಗ ಹಸಿವಿನ ವಿಚಾರದಲ್ಲಿ ಭಾರತದ ಪರಿಸ್ಥಿತಿ ತೀವ್ರ ಹದ ಗೆಟ್ಟಿದೆ ಎಂದು ಅವರು ಹೇಳಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ನ ಚುನಾವಣೆಯಲ್ಲಿ ಕೆ.ಕೆ.ಮಂಜುನಾಥ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ. ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷವು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿಲ್ಲ ಎಂಬುದಾಗಿ ಪ್ರತಿಸ್ಪರ್ಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕಾಗಿ ತಾವು ಈ ಸ್ಪಷ್ಟೀಕರಣ ಹಾಗೂ ದೃಢೀಕರಣ ನೀಡುತ್ತಿರುವುದಾಗಿ ಹೇಳಿದರು. ಇದೇ ಪ್ರಥಮ ಬಾರಿಗೆ ಶಿಕ್ಷಕ ಕ್ಷೇತ್ರಕ್ಕೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದವರಿಗೆ ಟಿಕೆಟ್ ನೀಡುವ ಕಾರ್ಯವಾಗಿದೆ ಎಂದು ಅವರು ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 300 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಅ. 22ರಂದು ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
Click this button or press Ctrl+G to toggle between Kannada and English