ಮಂಗಳೂರು : ಸಂಸ್ಕೃತಿ ಪ್ರತಿಷ್ಠಾನ ಹಾಗೂ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ಆಶ್ರಯದಲ್ಲಿ 170 ವಿದ್ಯಾರ್ಥಿಗಳಿಗೆ ಸುಮಾರು 1 ಕೋ.ರೂ. ವಿದ್ಯಾರ್ಥಿವೇತನವನ್ನು ನಗರದ ಟಿ.ವಿ.ರಮಣ್ ಪೈ ಕಾನ್ ವೆನ್ ಶನ್ ಹಾಲ್ ನಲ್ಲಿ ಶುಕ್ರವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ್ ಯುನಿವರ್ಸಲ್ ಲರ್ನಿಂಗ್‌ನ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್ ಪೈ ಕೊಂಕಣಿ ಭಾಷೆ, ಸಂಸ್ಕೃತಿ ಶ್ರೀಮಂತ ಹಾಗೂ ಸಮೃದ್ಧ ಪರಂಪರೆಯನ್ನು ಹೊಂದಿದೆ. ಭಾಷೆ ಬಾಂಧವ್ಯನ್ನು ಬೆಸೆಯುತ್ತದೆ. ಭಾಷೆ, ಸಂಸ್ಕೃತಿ ನಾಶವಾದರೆ ನಮ್ಮ ಅನನ್ಯತೆಯನ್ನು ಕಳೆದುಕೊಂಡಂತೆ. ಇದನ್ನು ಉಳಿಸಿ ಮುಂದಿನ ಪೀಳಿಗೆಗೆ ಸಂರಕ್ಷಿಸಿಡುವ ಕಾರ್ಯ ನಡೆಯಬೇಕು. ಜ್ಞಾನಾಧಾರಿತ ಸಶಕ್ತ ಯುವಜನತೆಯಿಂದ ಈ ಕಾರ್ಯ ಹೆಚ್ಚು ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಯುವಪೀಳಿಗೆಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಾಗ ಸಶಕ್ತ ಸಮುದಾಯ ರೂಪುಗೊಳ್ಳುತ್ತದೆ . ಇದರಿಂದ ಭಾಷೆ, ಸಂಸ್ಕೃತಿಯನ್ನು ಉಳಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಸಶಕ್ತೀಕರಣದಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ವಿದ್ಯಾವಂತ ಜನರ ಮೂಲಕ ಸತ್ವಭರಿತ ಮತ್ತು ಸಮೃದ್ಧ ಸಮಾಜ ನಿರ್ಮಾಣ ಸಾಕಾರಗೊಳ್ಳುತ್ತದೆ ಎಂದು ಪೈ ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ರಾಯನ್ ಇಂಟರ್ ನೇಶನಲ್ ಗ್ರೂಪ್ ನ ಆಡಳಿತ ನಿರ್ದೇಶಕಿ ಗ್ರೇಸ್ ಪಿಂಟೋ ಅವರು ಬಹುದೊಡ್ಡ ಮೊತ್ತವನ್ನು ವಿದ್ಯಾರ್ಥಿವೇತನವಾಗಿ ನೀಡುವ ಮೂಲಕ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ಉದಾತ್ತವಾದ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಬಾಳಿನಲ್ಲಿ ಯಶಸ್ಸು ಸಾಧಿಸಿ ಮತ್ತು ಅದನ್ನು ಸಮಾಜಕ್ಕೆ ಮರಳಿಸಬೇಕು ಎಂದು ಹಾರೈಸಿದರು.
ಕಾರ್ಪೊರೇಶನ್ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಬಿ.ಆರ್. ಭಟ್ ಅವರು ಮಾತನಾಡಿ, ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯೊಂದಿಗೆ ಬ್ಯಾಂಕ್ ಒಡಂಬಡಿಕೆ ಮಾಡಿಕೊಂಡಿದ್ದು ಶೈಕ್ಷಣಿಕ ಸಾಲ ಕುರಿತಂತೆ ವಿದ್ಯಾರ್ಥಿವೇತನ ಪಡೆದುಕೊಂಡ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿವೇತನ ಸಂಖ್ಯೆ ಹಾಗೂ ವಿವರವನ್ನು ನಮೂದಿಸಿ ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿವರಿಸಿದರು.
ಮೈಸೂರಿನ ಗಣೇಶ್ ಬೀಡಿ ವರ್ಕ್ಸ್ ಆಡಳಿತ ನಿರ್ದೇಶಕ ಎಂ. ಜಗನ್ನಾಥ ಶೆಣೈ ಅವರು ಭಾಷೆ ಹಾಗೂ ಸಂಸ್ಕೃತಿಯ ಹೊಣೆಗಾರಿಕೆ ಯಬಗ್ಗೆ ವಿವರಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಸಮುದಾಯ, ಭಾಷೆ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಸಂವರ್ಧನೆಯ ನಿಟ್ಟಿನಲ್ಲಿ ಕೇಂದ್ರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ಸು ಪಡೆದಿದೆ ಎಂದು ಹೇಳಿ ಇದರ ಸಾಕಾರಕ್ಕೆ ಕಾರಣೀಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇಸ್ರೇಲ್‌ನಲ್ಲಿ ಜರಗಿದ ವಾರ್ಷಿಕ ವಿಕಿಪಿಡಿಯ ವಿಶ್ವ ಸಮ್ಮೇಳನದಲ್ಲಿ ಕೊಂಕಣಿ ಭಾಷೆಗೆ ಸಂಬಂಧಿಸಿ ಪ್ರಬಂಧ ಮಂಡಿಸಿದ ಗುರುದತ್ ಬಂಟ್ವಾಳ್ ಅವರನ್ನು ಸಮ್ಮಾನಿಸಲಾಯಿತು.
ವೈದ್ಯಕೀಯ ವಿದ್ಯಾರ್ಥಿಗಳು ತಲಾ 40,000 ರೂ. ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಲಾ 30,000 ರೂಪಾಯಿಗಳಂತೆ ವಿದ್ಯಾರ್ಥಿವೇತನ ಪಡೆದರು.
ಉದ್ಯಮಿಗಳಾದ ಬದ್ರಿನಾಥ್, ರೋಹನ್ ಮೊಂತೇರೊ, ಕೊಂಕಣಿ ಭಾಷಾ ಮಂಡಳ್ ಅಧ್ಯಕ್ಷ ರಘನಾಥ್ ಶೇಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿವೇತನ ನಿಧಿಯ ಅಧ್ಯಕ್ಷ ರಾಮ್‌ದಾಸ್ ಕಾಮತ್ ಯು. ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾರ್ಥಿ ವೇತನ ನಿಧಿಯ ಕಾರ್ಯದರ್ಶಿ ಪ್ರದೀಪ್ ಜಿ. ಪೈ ವಂದಿಸಿದರು. ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ವೆಂಕಟೇಶ್ ಎನ್. ಬಾಳಿಗಾ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English