ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡಿದ ಆರೋಪ, ಆಸ್ತಿ ಮುಟ್ಟುಗೋಲು

11:35 AM, Monday, October 16th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

havala moneyಮಂಗಳೂರು : ದೇಶಾದ್ಯಂತ ಸಂಚಲನ ಮೂಡಿಸಿದ್ದ ಉಗ್ರರಿಗೆ ಹಣಕಾಸು ನೆರವಿನ ಹವಾಲಾ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಮಂಗಳೂರಿನಲ್ಲಿ 5 ಲಕ್ಷ ರೂಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಅಕ್ರಮ ಹಣ ಸಾಗಾಟ ಆರೋಪದ ಮೇಲೆ ಮಂಗಳೂರಿನ ಪಂಜಿಮೊಗರು ಎಂಬಲ್ಲಿನ ಮನೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಧೀರಜ್‌ ಸಾವೋ ಎಂಬಾತನ ಹಣದ ವ್ಯವಹಾರವನ್ನು ಗಮನಿಸಿದ ಜಾರಿ ನಿರ್ದೇಶನಲಯ, ಆತನಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈತನ ಬ್ಯಾಂಕ್ ಖಾತೆಗೆ ದೇಶದ ವಿವಿಧ ಭಾಗಗಳಿಂದ ಹಣ ಹರಿದು ಬಂದಿತ್ತು.

ಈ ಹಣದಲ್ಲಿ ತನ್ನ ಕಮಿಷನ್‌ ಇಟ್ಟುಕೊಳ್ಳುತ್ತಿದ್ದ ಸಾವೋ ಉಳಿದ ಹಣವನ್ನು ಇಂಡಿಯನ್‌ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸರಬರಾಜು ಮಾಡುತ್ತಿದ್ದ. ಜುಬೈರ್‌ ಹುಸೇನ್‌, ಅಯಿಷಾ ಬಾನು, ರಾಜು ಖಾನ್‌ ಮತ್ತು ಇತರರ ಖಾತೆಗೆ ಹಣ ರವಾನಿಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಾವೋ ವಹಿವಾಟಿನ ಮೇಲೆ ಸಂದೇಹವಿತ್ತು. ಹೀಗಾಗಿ ಚಲನವಲನಗಳನ್ನು ಗಮನಿಸುತ್ತಿದ್ದರು. ಈತನ ಹಣದ ಸಹಾಯದಿಂದಲೇ ಅಯಿಷಾ ಬಾನು ಮತ್ತು ಹುಸೇನ್‌ ಮಂಗಳೂರಿನ ಪಂಜಿ ಮೊಗರುವಿನಲ್ಲಿ ಖರೀದಿಸಿದ್ದ ವಸತಿ ಯೋಗ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ…

havala moneyಈ ಎಲ್ಲ ಆರೋಪಿಗಳು ಪಾಕಿಸ್ತಾನದ ಖಾಲಿದ್‌ ಜತೆ ನೇರ ಸಂಪರ್ಕದಲ್ಲಿದ್ದರು. ಈತನ ನಿರ್ದೇಶನದ ಮೇರೆಗೆ ಹಲವಾರು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಉಗ್ರರಿಗೆ ಹಣವನ್ನು ಕಳುಹಿಸಲಾಗುತ್ತಿತ್ತು. ಜತೆಗೆ ತಮಗೆ ಸೇರಬೇಕಾದ ಕಮೀಷನ್ ಅನ್ನೂ ಪಡೆದುಕೊಳ್ಳುತ್ತಿದ್ದರು. ಈ ಎಲ್ಲ ಖಾತೆಗಳಿಗೆ ದೇಶದ ವಿವಿಧ ಭಾಗಗಳಿಂದ ಅನಾಮಧೇಯ ವ್ಯಕ್ತಿಗಳು ಹಣ ಹಾಕುತ್ತಿದ್ದರು ಎಂದು ತಿಳಿದುಬಂದಿದೆ.

ಇಂಡಿಯನ್ ಮುಜಾಹಿದ್ದೀನ್ ಉಗ್ರರ ನಂಟಿನ ಹಿನ್ನಲೆಯಲ್ಲಿ 2013ರಲ್ಲಿ ಮಂಗಳೂರಿನ ಪೊಜಿಮೊಗರ ಎಂಬಲ್ಲಿ ಆಯೇಷಾ ಹಾಗೂ ಪತಿ ಜುಬೇರ್ ಹುಸೇನ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಈ ದಂಪತಿಗಳು ನೇರವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಗ್ಗೆ ಯಾವುದೇ ಪುರಾವೆ ಲಭ್ಯವಾಗಿರಲಿಲ್ಲ. ಆದರೆ, ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆಸಿದ ಬಗ್ಗೆ ಪುರಾವೆಗಳು ಲಭ್ಯವಾಗಿದ್ದವು.

ಜುಬೇರ್ ಹುಸೇನ್ 1995 ರಿಂದ 2001 ರವರೆಗೆ ಸೌದಿ ಅರೇಬಿಯಾದ ಆಲ್ ಕೊಬರ್ ಎಂಬಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಲಿಯಾಕತ್ ಪರಿಚಯವಾಗಿತ್ತು. 2001ರಲ್ಲಿ ಭಾರತಕ್ಕೆ ಮರಳಿ ಬಂದು ಮಂಗಳೂರಿನಲ್ಲಿ ಬೀಡಿ ಬ್ರಾಂಚ್ ತೆರೆದು ಕುಟುಂಬದೊಂದಿಗೆ ಬೀಡಿ ವ್ಯವಹಾರ ನಡೆಸುತಿದ್ದ. 4 ವರ್ಷಗಳ ಬಳಿಕ ಸಹ ಉದ್ಯೋಗಿಯಾಗಿದ್ದ ಲಿಯಾಖತ್, ಜುಬೇರ್ ಹುಸೇನ್‍ನನ್ನು ಸಂಪರ್ಕಿಸಿ ಹಣದ ನಿರ್ವಹಣೆಗೆ ಬ್ಯಾಂಕ್ ಅಕೌಂಟ್ ಒಂದನ್ನು ನೀಡುವಂತೆ ಒತ್ತಾಯಿಸಿದ್ದ. ಜುಬೇರ್ ಹುಸೇನ್ ತನ್ನ ಪತ್ನಿ ಆಯೇಷಾ ಬಾನು ಅವರ ಐಸಿಐಸಿಐ ಬ್ಯಾಂಕ್ ಖಾತೆ ನಂಬರ್ ನೀಡಿದ್ದ. ಈ ಹಿನ್ನಲೆಯಲ್ಲಿ ಖಾತೆಗೆ ವರ್ಗಾಯಿಸುವ ಹಣವನ್ನುತಾನು ಸೂಚಿಸಿದವರಿಗೆ ನೀಡುವಂತೆ ಲಿಯಾಕತ್ ತಿಳಿಸಿದ್ದ. ಪ್ರತಿ ಲಕ್ಷಕ್ಕೆ 2 ಸಾವಿರ ರೂಪಾಯಿ ಕಮೀಷನ್ ನೀಡುವುದಾಗಿ ಲಿಯಾಕತ್ ತಿಳಿಸಿದ್ದ.

havala moneyಸೌದಿಯಲ್ಲಿರುವ ಲಿಯಾಕತ್ ಭಾರತದ ಹಲವಾರು ಭಾಗದಲ್ಲಿರುವ ತನ್ನ ಸಹಚರರಿಗೆ ಹಣ ರವಾನಿಸಿದ್ದಾನೆ. ಹೀಗೆ ದೇಶ ಪ್ರವೇಶಿಸಿದ ಹಣ ಆಯೇಷಾ ಖಾತೆಗೆ ಜಮಾ ಮಾಡಲಾಗಿತ್ತು. ಪಂಜಾಬ್‍ನ ಕಪುರತಲಾ, ಪಟಾನ್ ಕೋಟ್, ಬಿಹಾರದ ಬಾಗಲ್ ಪುರ, ಒರಿಸ್ಸಾದ ಕಠಕ್ ಸೇರಿದಂತೆ ಧನ್‍ಬಾಗ್ ಹಾಗೂ ಫಿರೋಸ್‍ಪುರದಿಂದ ಆಯೇಷಾ ಬಾನು ಖಾತೆಗೆ ಕೋಟ್ಯಾಂತರ ರೂಪಾಯಿ ಹಣ ಜಮಾವಣೆ ಆಗಿತ್ತು. ಜೂನ್ 2012 ರಿಂದ ಜನವರಿ 2013ರವರೆಗೆ ಆಯೇಷಾ ಬಾನು ಖಾತೆಯಿಂದ 2.50 ಕೋಟಿ ರೂಪಾಯಿ ವ್ಯವಹಾರ ನಡೆದಿರುವುದು ಪತ್ತೆಯಾಗಿತ್ತು.

ಈ ಎಲ್ಲಾ ವ್ಯವಹಾರ ನಿರ್ವಹಿಸಿದ್ದು ಆಯೇಷಾ ಬಾನು ಪರವಾಗಿ ಆಕೆಯ ಪತಿ ಜುಬೇರ್ ಹುಸೇನ್. ಲಿಯಾಖತ್ ಹೇಳಿದ ವ್ಯಕ್ತಿಗಳಿಗೆ ಜುಬೇರ್ ಹುಸೇನ್ ಹಣವನ್ನು ಹಸ್ತಾಂತರಿಸಿದ್ದ. ಆದರೆ, ಹಣ ಸ್ವೀಕರಿಸಿರುವ ಯಾರದೇ ಪರಿಚಯ ಜುಬೇರ್ ಹುಸೇನ್‍ಗೆ ಇರಲಿಲ್ಲ. ಈ ಎಲ್ಲಾ ವ್ಯವಹಾರ ಕೇವಲ ಕಮೀಷನ್ ಆಸೆಗೆ ನಡೆದಿದ್ದು ಹವಾಲಾ ವ್ಯವಹಾರ ಎಂದು ಹೇಳಲಾಗಿತ್ತು.

ಬಿಹಾರದಲ್ಲಿ ಹಣ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಬಂಧಿಸಿದಾಗ ಅವರಲ್ಲಿರುವ ಪಾಕಿಸ್ತಾನದ ಸಿಮ್ ಕಾರ್ಡ್‍ನಿಂದ ವ್ಯವಹಾರ ನಡೆದಿದ್ದು ಸಾಬೀತಾದಾಗ ಪ್ರಕರಣದಲ್ಲಿ ಆಯಿಷಾ ಬಾನು ಹೆಸರು ಕೇಳಿ ಬಂತು. ಈ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಬಿಹಾರ ಪೊಲೀಸರು ಆಯಿಷಾ ಬಾನು ಹಾಗೂ ವಿಚಾರಣೆ ವೇಳೆ ಪತಿ ಜುಬೇರ್ ಹುಸೇನ್‍ನನ್ನು ಬಂಧಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English