ಮಂಗಳೂರು: ಐವರ್ನಾಡು ಗ್ರಾ.ಪಂ. ಪಿಡಿಒ ವರ್ಗಾವಣೆಗೆ ಸೂಚಿಸುವ ಮೂಲಕ ಉಸ್ತುವಾರಿ ಸಚಿವರು ಜಿ.ಪಂ. ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಆಡಳಿತ ಪಕ್ಷ ಬಿಜೆಪಿ ಸದಸ್ಯರು ಹಾಗೂ ಜಿ.ಪಂ. ಅಧ್ಯಕ್ಷರು ಮರಳು ಮಾಫಿಯಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಉಲ್ಲೇಖೀಸಿದರು ಎಂದು ಆರೋಪಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪರಸ್ಪರ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಆಡಳಿತ ಪಕ್ಷ ಹಾಗೂ ವಿಪಕ್ಷ ಸದನದಲ್ಲಿ ಏಕಕಾಲದಲ್ಲಿ ಸದನದ ಬಾವಿಗಿಳಿದು ಪರಸ್ಪರ ಪ್ರತಿಭಟನೆ ನಡೆಸಿರುವುದು ದ.ಕ. ಜಿ.ಪಂ. ಇತಿಹಾಸದಲ್ಲೇ ಇದೇ ಪ್ರಥಮವಾಗಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.
ವಿಷಯ ಪ್ರಸ್ತಾವಿಸಿದ ಬಿಜೆಪಿ ಸದಸ್ಯ ಹರೀಶ್ ಕಂಜಿಪಿಲಿ ಅವರು ಐವರ್ನಾಡು ಗ್ರಾ.ಪಂ.ನಲ್ಲಿ ದಕ್ಷ ಅಧಿಕಾರಿಯಾಗಿದ್ದ ಹಾಗೂ ಗ್ರಾ.ಪಂ.ಗೆ ಗಾಂಧಿ ಪುರಸ್ಕಾರ ದೊರೆಯುವಲ್ಲಿ ಶ್ರಮಿಸಿದ್ದ ಪಿಡಿಒ ಡಿ. ಶೇಖರ್ ಅವರನ್ನು ಗಾಂಧಿ ಪುರಸ್ಕಾರ ಪ್ರದಾನ ಸಮಾರಂಭಕ್ಕೆ ಎರಡು ದಿನ ಬಾಕಿ ಇರುವಂತೆಯೇ ಸುಬ್ರಹ್ಮಣ್ಯ ಗ್ರಾ.ಪಂ.ಗೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರ್ಗಾಯಿಸಿದ್ದಾರೆ. ಈ ನಿಯಮ ಬಾಹಿರ ವರ್ಗಾವಣೆ ಮಾಡಲಾಗಿದ್ದು ಇದರ ವಿರುದ್ಧ ಸುಳ್ಯದಲ್ಲಿ ಪ್ರತಿಭಟನೆ ಕೂಡ ನಡೆದಿದೆ. ಅದುದರಿಂದ ಅವರನ್ನು ಮರಳಿ ಐವರ್ನಾಡು ಗ್ರಾ.ಪಂ.ಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಇದನ್ನು ಬಿಜೆಪಿಯ ಇತರ ಸದಸ್ಯರು ಬೆಂಬ ಲಿಸಿದರು.
ಐವರ್ನಾಡು ಪಿಡಿಒ ಅವರ ವರ್ಗಾವಣೆ ಕೋರಿ ಕಾಂಗ್ರೆಸ್ ನಾಯಕರೋರ್ವರು ನೀಡಿರುವ ಕೋರಿಕೆ ಪತ್ರದಲ್ಲಿ ಪಿಡಿಒ ವರ್ಗಾಯಿಸುವಂತೆ ಸೂಚನೆ ನೀಡಿ ಉಸ್ತುವಾರಿ ಸಚಿವರು ಸಹಿ ಮಾಡಿದ್ದಾರೆ ಎನ್ನಲಾದ ಪತ್ರವನ್ನು ಹರೀಶ್ ಕಂಜಿಪಿಲಿ ಸಭೆಯಲ್ಲಿ ಪ್ರದರ್ಶಿಸಿ ಸದಸ್ಯರಿಗೆ ವಿತರಿಸಿದರು. ಇದು ಜಿ.ಪಂ. ಆಡಳಿತದಲ್ಲಿ ಉಸ್ತುವಾರಿ ಸಚಿವರು ನಡೆಸಿರುವ ಹಸ್ತಕ್ಷೇಪವಾಗಿದೆ ಎಂದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದರು.
ಉಸ್ತುವಾರಿ ಸಚಿವರ ಪತ್ರದ ಬಗ್ಗೆ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯುತ್ತಿದ್ದ ವೇಳೆ ಜಿ.ಪಂ. ಅಧ್ಯಕ್ಷರು ಉಲ್ಲೇಖೀಸಿದ ಮರಳು ಮಾಫಿಯಾ ಮಾತು ಕಾಂಗ್ರೆಸ್ ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಸಭೆಯಲ್ಲಿ ಉತ್ತರ ನೀಡುವ ಸಂದರ್ಭದಲ್ಲಿ ಮರಳು ಮಾಫಿಯಾ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಜಿ.ಪಂ. ಅಧ್ಯಕ್ಷರು ಉಲ್ಲೇಖ ಮಾಡಿದರು ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರೆ ತಾನು ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಉಲ್ಲೇಖೀಸಿಲ್ಲ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು. ಇದನ್ನು ಒಪ್ಪದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಇದರೊಂದಿಗೆ ಏಕಕಾಲದಲ್ಲಿ ಆಡಳಿತ ಮತ್ತು ವಿಪಕ್ಷದ ಸದಸ್ಯರಿಂದ ಪ್ರತಿಭಟನೆ ನಡೆಯಿತು. ಸ್ವಲ್ಪ ಸಮಯದ ಬಳಿಕ ಬಿಜೆಪಿ ಸದಸ್ಯರು ಮತ್ತ ಆಸನಗಳಿಗೆ ಹಿಂದಿರುಗಿ ವರ್ಗಾವಣೆಗೊಂಡಿರುವ ಪಿಡಿಒ ಅವರನ್ನು ಮರಳಿ ಐವರ್ನಾಡು ಗ್ರಾ.ಪಂ.ಗೆ ನಿಯೋಜನೆಗೊಳಿಸುವಂತೆ ಆಗ್ರಹಿಸಿದರು.
ಜಿ.ಪಂ. ಅಧ್ಯಕ್ಷರು ಉಸ್ತುವಾರಿ ಸಚಿವರನ್ನು ಉಲ್ಲೇಖೀಸಿ ಮರಳು ಮಾಫಿಯಾ ಮಾತುಗಳನ್ನು ಆಡಿದ್ದಾರೆ ಎಂದು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದಾಗ ಸಭೆಯನ್ನು ಅನಿರ್ದಿ ಷ್ಟಾವಧಿಗೆ ಮುಂದೂಡಲಾಯಿತು.
ಪಿಡಿಒ ಶೇಖರ್ ಅವರನ್ನು ಮರಳಿ ಐವರ್ನಾಡು ಗ್ರಾ.ಪಂ.ಗೆ ನಿಯೋಜಿಸುವಂತೆ ನಿರ್ಣಯ ಕೈಗೊಳ್ಳಲು ಬಿಜೆಪಿ ಸದಸ್ಯರು ಒತ್ತಾ ಯಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತ ಪಡಿಸಿದರು. ಪಿಡಿಒ ಅವ ರನ್ನು ಐವರ್ನಾಡು ಗ್ರಾ.ಪಂ.ಗೆ ಮರು ನಿಯೋಜನೆ ಗೊಳಿಸುವಂತೆ ಬಹುಮತದ ನಿರ್ಣಯವಾಗಿ ದಾಖಲಿಸುವಂತೆ ಅಧ್ಯಕ್ಷರು ಸೂಚಿಸಿದರು.
Click this button or press Ctrl+G to toggle between Kannada and English