ಕೆಆರ್‌ಡಿಎಲ್‌ನ ಕಾಮಗಾರಿಗಳ ಸಮಗ್ರ ತನಿಖೆಗೆ ಸದನ ಸಮಿತಿ ರಚಿಸಲು ತೀರ್ಮಾನ :ದ.ಕ.ಜಿ.ಪಂ.

1:12 PM, Tuesday, October 17th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Zilla P. councilಮಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಯಮಿತ (ಕೆಆರ್‌ಡಿಎಲ್)ದಿಂದ ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಆಗಿದೆ ಎನ್ನಲಾದ ಹಗರಣಗಳ ತನಿಖೆಗೆ ಸದನ ಸಮಿತಿಯನ್ನು ಮರು ರಚಿಸಲು ದ.ಕ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯ ವೇಳೆ ಸದಸ್ಯರ ಆರೋಪ, ಆಗ್ರಹದ ಮೇರೆಗೆ ಕೆಆರ್‌ಡಿಎಲ್‌ನ ಕಾಮಗಾರಿಗಳ ಸಮಗ್ರ ತನಿಖೆಗೆ ಸದನ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಆಗಿರುವ ಅವ್ಯವಹಾರ ತನಿಖೆಗೆ 2 ತಿಂಗಳ ಹಿಂದೆ ಸದನ ಸಮಿತಿಗೆ ನಿರ್ಣಯಿಸಲಾಗಿತ್ತು. ಅದಾಗಿ 15 ದಿನಗಳಲ್ಲಿ ಸಮಿತಿ ರನಚೆ ಆಗಿದೆ. ಆದರೆ ಕಳೆದ ಎರಡು ದಿನಗಳ ಹಿಂದಷ್ಟೇ ಸದನ ಸಮಿತಿಯ ಸದಸ್ಯರಿಗೆ ಕರೆ ಮಾಡಿ ನಾಳೆ ಇಂತಹ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂಬ ಕರೆ ಬಂದಿದೆ. ಆ ರೀತಿ ಒಂದು ದಿನದಲ್ಲಿ ಹೋಗಿ ಪರಿಶೀಲನೆ ಮಾಡಲು ನಾವೇನು ಐಸಿಯುನಲ್ಲಿರುವ ರೋಗಿಯನ್ನು ನೋಡಲು ಹೋಗುವುದೇ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಸಭೆಯಲ್ಲಿ ಆಕ್ಷೇಪಿಸಿದರು.

ಜಿ.ಪಂ. ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ 12 ಸದಸ್ಯರ ಸಮಿತಿಗೆ ಕೆಆರ್‌ಡಿಎಲ್‌ನ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿಸಿದ ಬಗ್ಗೆಯೂ ಸಭೆಯಲ್ಲಿ ಸದಸ್ಯರಿಂದ ಅಸವಾಧಾನ ವ್ಯಕ್ತವಾಯಿತು.

Zilla P. councilಈ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಈಗಾಗಲೇ ಆಗಿರುವ ಸದನ ಸಮಿತಿ ಪರಿಪೂರ್ಣವಾಗಿಲ್ಲ. ಹಿರಿಯ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಿ ಕಾರ್ಯವ್ಯಾಪ್ತಿ ಹಾಗೂ ಕಾಲಮಿತಿಯನ್ನು ಸ್ಪಷ್ಟಪಡಿಸಬೇಕಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಗಳು ನಡೆದಿರುವ, ನಡೆಯಬೇಕಿರುವ ಸ್ಥಳದ ಬಗ್ಗೆ ಮಾಹಿತಿ ಒದಗಿಸಬೇಕಿರುವುದರಿಂದ ಆ ಇಲಾಖೆಯ ಅಧಿಕಾರಿಯೂ ಸಮಿತಿಯಲ್ಲಿರಬೇಕಾಗುತ್ತದೆ. ಈಗಾಗಲೇ ರಚಿಸಲಾಗಿರುವ ಸಮಿತಿಗೆ ಸಂಬಂಧಿಸಿ ಲೋಪ ಆಗಿದೆ. ಪ್ರಸ್ತುತ ಅಧ್ಯಕ್ಷರು ಜಿ.ಪಂ. ಸದಸ್ಯರ ಹೆಸರನ್ನು ನೀಡಿದ್ದಲ್ಲಿ ಮತ್ತೆ ಹೊಸ ಸಮಿತಿ ರಚನೆ ವಾಡಲಾಗುವುದು ಎಂದು ಹೇಳಿದರು. ಸದಸ್ಯರ ಆಗ್ರಹದ ಹಿನ್ನೆಲೆಯಲ್ಲಿ ಸಮಿತಿಯಲ್ಲಿ ಜಿ.ಪಂ.ನ ಹಿರಿಯ ಅಧಿಕಾರಿಯೊಬ್ಬರನ್ನು ಸದನ ಸಮಿತಿಗೆ ಆಯ್ಕೆ ಮಾಡಲು ನಿರ್ಣಯಿಸಲಾಯಿತು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ (ಎನ್‌ಆರ್‌ಡಿಡಬ್ಲುಪಿ)ಯಡಿ ಲಭ್ಯವಿರುವ ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ ಅನುದಾನವನ್ನು ಸಂಪೂರ್ಣವಾಗಿ ಮುಂದುವರಿದ ಕಾಮಗಾರಿ(ಸ್ಪಿಲ್ ಓವರ್)ಗಳಿಗೆ ವಿನಿಯೋಗಿಸುವುದನ್ನು ವಿರೋಧಿಸಿ ಕಳೆದ ಸಭೆಯಲ್ಲಿ ಒಮ್ಮತವನ್ನು ಪ್ರದರ್ಶಿಸಲಾಗಿತ್ತು. ಲಭ್ಯವಿರುವ ಅನುದಾನವನ್ನು 36 ಕ್ಷೇತ್ರಗಲಿಗೆ 47.73 ಲಕ್ಷ ರೂ.ನಂತೆ ಹಂಚಿಕೆ ಮಾಡಲು ನಿರ್ಣಯಿಸಲಾಗಿತ್ತು. ಆದರೆ ಬಂಟ್ವಾಳದಲ್ಲಿ ಸದಸ್ಯರು ಈ ಬಗ್ಗೆ ಚರ್ಚೆ ನಡೆಸಿ ಮುಂದುವರಿದ ಕಾಮಗಾರಿಯ ವೆಚ್ಚ ಅಧಿಕವಿರುವುದರಿಂದ ಅದನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಿಕೊಳ್ಳುವುದರೊಂದಿಗೆ ಹೊಸ ಕ್ರಿಯಾ ಯೋಜನೆಗೆ ಮುಂದಾಗಿರುವುದಾಗಿ ಸದಸ್ಯ ಎಂ.ಎಸ್. ಮುಹಮ್ಮದ್ ಸಭೆಗೆ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English