ಮಂಗಳೂರು: ಮಾದಕ ದ್ರವ್ಯಗಳ ಸೇವನೆಯಿಂದ ಯುವ ಜನತೆಯ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆತಂಕ ಉಂಟುಮಾಡುತ್ತಿರುವ ಪ್ರಕರಣಗಳ ತಡೆಗಾಗಿ ವಿದ್ಯಾರ್ಥಿಗಳು ಜಾಗೃತರಾಗಬೇಕು. ಗಾಂಜಾ, ಅಫೀಮು, ನೈಟ್ರೇಟ್೧೦ ಇತ್ಯಾದಿ ಮಾದಕ ವಸ್ತುಗಳನ್ನು ವಿತರಿಸುವವರು, ಮಾರುವವರು,ಬಳಸುವವರು, ಅವರ ಅಡ್ಡೆಗಳ ಬಗ್ಗೆ ಮಾಹಿತಿಯನ್ನು ಪೋಲೀಸ್ ಇಲಾಖೆಗೆ ನೀಡಿ ಸಹಕರಿಸಬೇಕು. ಈ ಪಿಡುಗಿನಿಂದ ವಿದ್ಯಾರ್ಥಿಗಳನ್ನು ಕಾಪಾಡಿ ಅವರ ಉಜ್ವಲ ಭವಿಷ್ಯಕ್ಕೆ ಸಹಕರಿಸಬೇಕು ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್.ಐ. ಪ್ರಸನ್ನ ಎಂ.ಎಸ್. ಹೇಳಿದರು.
ಅವರು ದ.ಕ ಜಿಲ್ಲಾ ಪೋಲೀಸ್ ಇಲಾಖೆಯ ಡ್ರಗ್ಸ್ ತಡೆ ಅಭಿಯಾನದ ಅಂಗವಾಗಿ ಮಂಗಳವಾರ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಈ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲು ಡ್ರಾಪ್‌ಬಾಕ್ಸ್‌ಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲೆಯ ಎಲ್ಲೆಡೆ ನೀಡಲಾಗುತ್ತಿದೆ. ಅವುಗಳಲ್ಲಿ ತಮಗೆ ತಿಳಿದಿರುವ ಮಾಹಿತಿ ನೀಡಿ ನೆರವಾಗುವಂತೆ ಅವರು ವಿನಂತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಪ್ರಿಯಾ ಫ್ರ್ಯಾಂಕ್, ಸಹಿತ ಬೋಧಕ ಸಿಬಂದಿಗಳು ಹಾಜರಿದ್ದರು. ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English