ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಒಟ್ಟು 252.50 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ. 22ರಂದು ಬಂಟ್ವಾಳಕ್ಕೆ ಆಗಮಿಸಲಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರೈ, ಈಗಾಗಲೇ ಪೂರ್ಣಗೊಂಡಿರುವ ಒಟ್ಟು ರೂ. 148.29 ಕೋಟಿಯ ಯೋಜನೆಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದು, 104.21 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಎಂದರು.
ಒಟ್ಟು ರೂ. 252.50 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರಕಲಿದೆ. ಕ್ಷೇತ್ರದ ಹಲವಾರು ಬಹುನಿರೀಕ್ಷಿತ ಯೋಜನೆಗಳು ಅಂದು ಲೋಕಾರ್ಪಣೆಗೊಳ್ಳಲಿದ್ದು, ಜನತೆಯ ದೀರ್ಘಕಾಲದ ಬೇಡಿಕೆಗಳು ಈಡೇರುತ್ತಿವೆ. ಅಭಿವೃದ್ಧಿಯ ಪಥದಲ್ಲಿ ಬಂಟ್ವಾಳ ಕ್ಷೇತ್ರವು ಹೊಸ ಮೈಲಿಗಲ್ಲನ್ನೇ ತಲುಪಿದ್ದು, ಭವಿಷ್ಯದ ಮುನ್ನೋಟವನ್ನು ಗಮನದಲ್ಲಿರಿಸಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ ಎಂದು ತಿಳಿಸಿದರು.
ಮಿನಿ ವಿಧಾನಸೌಧ, ನಿರೀಕ್ಷಣಾ ಮಂದಿರ ಕಟ್ಟಡ, ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣ, 100 ಹಾಸಿಗೆಗಳ ನೂತನ ಆಸ್ಪತ್ರೆ, ನೂತನ ಮೆಸ್ಕಾಂ ಕಟ್ಟಡ, ಸಮಗ್ರ ಕುಡಿಯುವ ನೀರಿನ ಯೋಜನೆ, ಟ್ರೀಪಾರ್ಕ್, ಪ್ರಾದೇಶಿಕ ಸಾರಿಗೆ ಕಚೇರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಲೋಕಾರ್ಪಣೆಗೊಳಿಸುವರು ಎಂದರು.
Click this button or press Ctrl+G to toggle between Kannada and English