ಮಂಗಳೂರು: ಸಚಿವ ರಮಾನಾಥ ರೈ ಕೈ-ಬಾಯಿ ಶುದ್ಧವಾಗಿಟ್ಟುಕೊಂಡ ಮಾನವೀಯತೆ ಹೊಂದಿರುವ ರಾಜಕಾರಣಿ. ಅವರು ಓರ್ವ ಸಜ್ಜನ ರಾಜಕಾರಣಿ. ಕೋಮುವಾದವನ್ನು ಅವರು ಮಾಡಿಲ್ಲ, ಮುಂದೆನೂ ಮಾಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರು-ಬಂಟ್ವಾಳದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತಮಾಡಿದ ಅವರು, ಕೋಮುವಾದ ಮಾಡುವವರು ವಿನಾ ಕಾರಣ ಅವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಆದರೆ, ರೈ ಎಲ್ಲರೂ ಅನುಸರಿಸಬೇಕಾದ ಆದರ್ಶ ರಾಜಕಾರಣಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದಿಗಳ ಕಾಟ ಜಾಸ್ತಿ ಆಗಿದೆ. ಆಕ್ರೋಶ ಭರಿತರಾಗಿ ಕೆಲವು ಸಲ ಮಾತನಾಡಿರಬಹುದು.
ಕೋಮುವಾದಿಗಳು ಜಿಲ್ಲೆಯನ್ನು ಪ್ರಯೋಗಾಲಯ ಮಾಕೊಂಡಿದ್ದರು. ಇದಕ್ಕಾಗಿ ಉಳ್ಳಾಲದಿಂದ ಉಡುಪಿಯವರೆಗೆ ಪಾದಾಯತ್ರೆ ಮಾಡಲಾಗಿತ್ತು. ಹಾಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ 8 ರಲ್ಲಿ 7 ಸ್ಥಾನ ಪಡೆದಿದೆ. ಮಂಗಳೂರು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಹೊಂದಿರುವ ಜಿಲ್ಲೆಯಾಗಿದ್ದು, 2018ಕ್ಕೆ 8ಕ್ಕೆ 8 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರ ಮಿಷನ್ 150 ಮಂತ್ರ ಹೋಗಿ ಇದೀಗ ಮಿಷನ್ 50 ಬಂದಿದೆ. ಅಮಿತ್ ಶಾ ಬಂದು ಹೋದ ಮೇಲೆ ಆರೋಪ ಹೊರಿಸುವ ಕೆಲಸ ಜಾಸ್ತಿಯಾಗಿದೆ. ಕೋಮುವಾದಿ ಪಕ್ಷಕ್ಕೆ ಅಧಿಕಾರ ಕೊಡುವ ಪ್ರಯತ್ನ ಮಾಡಬೇಡಿ. ಕೊಟ್ಟ ಮಾತು ಈಡೇರಿಸಿದ ಸರ್ಕಾರಕ್ಕೆ ಓಟು ಕೊಡಬೇಕು. 252 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡುವ ಕೆಲಸ ಇತರ ಯಾವುದೇ ಸರ್ಕಾರ ಮಾಡಿಲ್ಲ. 224 ಕ್ಷೇತ್ರದಲ್ಲೂ ಇದೇ ಅಭಿವೃದ್ಧಿಯಾಗಿದೆ.
155 ಭರವಸೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದೆ. ಯಡಿಯೂರಪ್ಪ ಭಾಷಣ ಮಾಡಿದಾಗಲೆಲ್ಲಾ ಸೈಕಲ್, ಸೀರೆ ಕೊಟ್ಟೆ ಎನ್ನುತ್ತಾರೆ. ಈ ರೀತಿ ಹೇಳುತ್ತಲೇ ಜೈಲಿಗೆ ಹೋಗಿ ಬಂದರು. ಮಾನ ಮರ್ಯಾದೆ ಇರುವವರು ಈ ರೀತಿ ಹೇಳಲ್ಲ. ಬೇಜವಾಬ್ದಾರಿ ಹೇಳಿಕೆ ನೀಡಿ ಅವರ ಘನತೆ ಅವರೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ಯಡಿಯೂರಪ್ಪ ಚೆಕ್ ಮೂಲಕ ದುಡ್ಡು ತೆಗೆದುಕೊಂಡ ಗಿರಾಕಿ. ಹಗರಣ ರಹಿತವಾದ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಮೋದಿ ಕೂಡ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ಹೇಳಿದ ಯಾವ ಮಾತು ಸಹ ಈಡೇರಿಸಿಲ್ಲ. ಅಚ್ಛೆ ದಿನ್ ಅಂಬಾನಿ, ಅದಾನಿ, ರಾಮದೇವ್ ಅಂತರಿಗೆ ಬಂತು ಎಂದು ಬಾಬಾ ರಾಮ್ ದೇವ್‌ರನ್ನು ಏಕವಚನದಲ್ಲಿ ಸಂಭೋದಿಸಿದ ಸಿಎಂ, ಮೋದಿ ಮನ್ ಕೀ ಬಾತ್ ಹೇಳುತ್ತಾರೆ. ಆದರೆ, ನಮ್ಮದು ಕಾಮ್ ಕೀ ಬಾತ್ ಎಂದರು.
ಪ್ರತೀ ಕುಟುಂಬಕ್ಕೆ 50 ಸಾವಿರದಂತೆ 8165 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಜಾತ್ಯಾತೀತತೆಯಲ್ಲಿ ನಂಬಿಕೆಯಿರುವ ಪಕ್ಷ ನಮ್ಮದು. ಯಡಿಯೂರಪ್ಪ ಸಿಎಂ ಆಗಿದ್ದಾಗ ಒಂದೇ ಒಂದು ದಿನ ದಲಿತರ ಮನೆಗೆ ಹೋಗಿಲ್ಲ. ದಲಿತರ ಮನೆಗೆ ಹೋಗುತ್ತೇವೆಂದು ಹೇಳಿ ಅವರು ತಿಂದಿದ್ದು ಹೋಟೆಲ್ ಫುಡ್ ಎಂದು ಕುಟುಕಿದರು.
Click this button or press Ctrl+G to toggle between Kannada and English