ಮಂಗಳೂರು: ಗ್ರಾಮೀಣ ಪ್ರದೇಶಗಳ ಪ್ರಗತಿ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೊಡ್ಡ ಕೊಡುಗೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಗ್ರಾಮೀಣ ಜನತೆಯ ನೆಮ್ಮದಿಯ ಜೀವನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಹಳಷ್ಟು ಕೊಡುಗೆ ನೀಡಿದೆ. ಯೋಜನೆಯ ಕಾರ್ಯಕ್ರಮಗಳು ಬಡತನ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.
ಜನ ಸ್ವಾಭಿಮಾನದಿಂದ ಜೀವಿಸಲು ಸ್ವಸಹಾಯ ಸಂಘಗಳು ಬಹಳಷ್ಟು ನೆರವಾಗಿವೆ. ರಾಜ್ಯ ಸರ್ಕಾರವು ಈ ವರ್ಷದಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡಲಿದೆ. ಸ್ವಸಹಾಯ ಸಂಘಗಳಿಗೆ ನೀಡಿದ ಸಾಲದಲ್ಲಿ ಶೇಕಡಾ 90ರಷ್ಟು ವಾಪಸ್ ಬರುತ್ತಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜನರೂ ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂಬ ಗುರಿಯೊಂದಿಗೆ ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶಗಳ ಜನರು ಸ್ವಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ಇದರ ಸದುಪಯೋಗವನ್ನು ಪಡೆದು ಹೊಸ ಬದುಕನ್ನು ಕಟ್ಟಿಕೊಳ್ಳಬೇಕು. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಯಾವುದೇ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದ ಸಿಎಂ ಗ್ರಾಮಾಭಿವೃದ್ಧಿ ಯೋಜನೆ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ, ಹೇಮಾವತಿ ವಿ. ಹೆಗ್ಗಡೆ, ಸಚಿವರುಗಳಾದ ಡಿ.ಕೆ ಶಿವಕುಮಾರ್, ಬಿ. ರಮಾನಾಥ ರೈ, ಯು.ಟಿ. ಖಾದರ್, ಬಿ.ಟಿ. ಜಯಚಂದ್ರ, ಈಶ್ವರ ಖಂಡ್ರೆ, ಶಾಸಕರಾದ ಅಭಯಚಂದ್ರ ಜೈನ್, ಐವನ್ ಡಿಸೋಜ, ಶಕುಂತಲಾ ಶೆಟ್ಟಿ, ಗೋಪಾಲ ಪೂಜಾರಿ, ಮೊಯ್ದಿನ್ ಬಾವ, ವಿನಯಕುಮಾರ್ ಸೊರಕೆ, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English