ಮಂಗಳೂರು : ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 50ನೇ ಪಟ್ಟಾಭಿಷೇಕ ವರ್ಧಂತ್ಯೋತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪಟ್ಟಾಭಿಷಿಕ್ತರಾಗಿ 49 ವರ್ಷ ನ್ಯಾಯದೇಗುಲವೆಂದೇ ಹೆಸರು ಗಳಿಸಿರುವ ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಹೆಗ್ಗಡೆ ಧರ್ಮಾಧಿಕಾರಿ ಪಟ್ಟ ಅಲಂಕರಿಸಿ 49 ವರ್ಷ ಪೂರೈಸಿದ್ದಾರೆ. 1968ರ ಅಕ್ಟೋಬರ್ 24ರಂದು ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿದ್ದರು.
ಉತ್ಸವಕ್ಕೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮನ ಪ್ರಮುಖ ಆಕರ್ಷಣೆಯಾಗಿತ್ತು. ಮೈಸೂರು ಮಹಾರಾಜರನ್ನು ದೇವಸ್ಥಾನದ ಆಡಳಿತ ಮಂಡಳಿ ಭವ್ಯ ಮೆರವಣಿ ಮೂಲಕ ಸ್ವಾಗತಿಸಿತು.
ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದ ವಿರೇಂದ್ರ ಹೆಗ್ಗಡೆ ಕುಟುಂಬ ದೇವರಿಗೆ ವಿಶೇಷ ಪೂಜೆ ಸಲ್ಲಸಿತು. ನಂತರ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕಾಲ ಕಳೆದ ವಿರೇಂದ್ರ ಹೆಗ್ಗಡೆಯವರಿಗೆ ಸಾವಿರಾರು ಅಭಿಮಾನಿಗಳು, ಯತಿಶ್ರೇಷ್ಠರು, ವಿವಿಧ ಕ್ಷೇತ್ರಗಳ ಗಣ್ಯರು ಫಲ-ಪುಷ್ಪ ನೀಡಿ ಶುಭಾಶಯ ಸಲ್ಲಿಸಿದರು.
ಉತ್ಸವದ ಹಿನ್ನೆಲೆಯಲ್ಲಿ ನೆಲ್ಯಾಡಿ ಬೀಡುವಿನಿಂದ ದೇವಸ್ಥಾನದ ಪ್ರಮುಖ ರಸ್ತೆಗಳಲ್ಲಿ ವಿಶೇಷ ವಾಹನದ ಮೂಲಕ ವೀರೇಂದ್ರ ಹೆಗ್ಗಡೆಯವರ ಮೆರವಣಿಗೆ ನಡೆಸಲಾಯಿತು. ನಾಡಿನ ಸಂಸ್ಕೃತಿ, ಪರಂಪರೆ ಸಾರುವ ಸ್ತಬ್ಧಚಿತ್ರಗಳು, ಕಲಾ ಪ್ರಕಾರಗಳು ಧರ್ಮಸ್ಥಳದ ಹಿರಿಮೆಯನ್ನು ಸಾರಿದವು.
ಈ ನಡುವೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ.ಡಿ. ವೀರೇಂದ್ರ ಹೆಗ್ಗಡೆ , “ಈ ಹಿಂದಿನ ಧರ್ಮಾಧಿಕಾರಿಗಳ ರೂಪದಲ್ಲಿಯೇ ಸೇವಾ ಕಾರ್ಯಗಳನ್ನು ಮುಂದುವರಿಸಿದ್ದೇನೆ. ರಾಜ್ಯದಾದ್ಯಂತ ಜನರು ಪ್ರೀತಿ ಇಟ್ಟುಕೊಂಡಿದ್ದಾರೆ. ಅವರೆಲ್ಲರಿಗೂ ಆಭಾರಿಯಾಗಿದ್ದೇನೆ,” ಎಂದು ಹೇಳಿದರು.
Click this button or press Ctrl+G to toggle between Kannada and English