ಮಂಗಳೂರು: ಹಾಡುಹಗಲೇ ಮನೆಗೆ ನುಗ್ಗಿ ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಘಟನೆ ಮುಲ್ಕಿಯ ಕೋಲ್ನಾಡು ಎಂಬಲ್ಲಿ ನಡೆದಿದೆ. ಅಕ್ಟೋಬರ್ 25ರ ಸಂಜೆ ಈ ಘಟನೆ ನಡೆದಿದೆ. ಮೆಸ್ಕಾಂ ಬಿಲ್ಲು ಪರಿಶೀಲಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಬಂದು ಮಹಿಳೆಗೆ ಹಲ್ಲೆ ನಡೆಸಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಹಲ್ಲೆಯಿಂದ ತೀವ್ರ ಗಾಯಗೊಂಡ ಮಹಿಳೆಯನ್ನು ಕೋಲ್ನಾಡು ಗುತ್ತು ನಿವಾಸಿ ಶಾರದಾ ಶೆಟ್ಟಿ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಸಂಜೆ ಆಗಂತುಕನೊಬ್ಬ ರಾಷ್ಟ್ರೀಯ ಹೆದ್ದಾರಿ ಚಂದ್ರ ಮೌಳೀಶ್ವರ ದೇವಸ್ಥಾನದ ಕ್ರಾಸ್ ಬಳಿಯ ಕೋಲ್ನಾಡು ಗುತ್ತುವಿನ ಪ್ರಭಾಕರ ಶೆಟ್ಟಿ ಎಂಬವರ ಮನೆಗೆ ಬಂದು ಬಾಗಿಲು ತಟ್ಟಿದ್ದಾನೆ. ಈ ಸಂದರ್ಭ ಮನೆಯಲ್ಲಿ ಪ್ರಭಾಕರ ಶೆಟ್ಟಿ ಅವರು ಮಗಳ ಮದುವೆಯ ಕಾರ್ಯನಿಮಿತ್ತ ಉಡುಪಿ ಕಡೆಗೆ ಹೋಗಿದ್ದರು. ಮನೆಯಲ್ಲಿ ಪತ್ನಿ ಶಾರದಾ ಶೆಟ್ಟಿ ಒಬ್ಬರೇ ಇದ್ದ ಸಂದರ್ಭದಲ್ಲಿ ಮನೆಗೆ ಬಂದ ವ್ಯಕ್ತಿ ಶಾರದಾ ಅವರ ಬಳಿ, “ನಾನು ಮೆಸ್ಕಾಂನ ಉದ್ಯೋಗಿ ನೀವು ಬಿಲ್ಲು ಕಟ್ಟಿದ್ದಾರಾ ಎಂದು ಪರಿಶೀಲಿಸಲು ಬಂದಿದ್ದೇನೆ,” ಎಂದು ಹೇಳಿದ್ದಾರೆ.
ಕೂಡಲೇ ಶಾರದಾ ಅವರಿಗೆ ಸಂಶಯ ಬಂದಿದ್ದು ವ್ಯಕ್ತಿಯನ್ನು ಪ್ರಶ್ನಿಸುವ ಮೊದಲೇ ಆ ಅಪರಿಚಿತ ವ್ಯಕ್ತಿ ಶಾರದಾರವರ ಕತ್ತಲಿದ್ದ ಕರಿಮಣಿ ಎಳೆದಿದ್ದಾನೆ. ಕುತ್ತಿಗೆ ಅಮುಕಿ ಶಾರದಾ ಅವರ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿ ಮನೆಯ ಕೋಣೆಯ ಮೇಜಿನಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಮುಲ್ಕಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಶ್ವಾನದಳ ಹಾಗು ಬೆರಳಚ್ಚು ತಜ್ಞರೂ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English