ಮಂಗಳೂರು : ದ.ಕ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಮಕೃಷ್ಣ ಮಠದ ಸಹಭಾಗಿತ್ವದಲ್ಲಿ ಮಠದಲ್ಲಿ ಶನಿವಾರ ಆಯೋಜಿಸಿದ ‘ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರೀಯಾಶೀಲ ಆಡಳಿತ’ ಪ್ರತಿಭಾ ಪುರಸ್ಕಾರ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಸಮಾವೇಶವನ್ನು ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿ. ಎಚ್. ಶಂಕರಮೂರ್ತಿ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದೊಂದಿಗೆ ದೇಶಾಭಿಮಾನ ಮತ್ತು ಸಂಸ್ಕಾರ ರೂಪಿಸುವ ಅಗತ್ಯವಿದೆ, ಸ್ವಾತಂತ್ರ್ಯಪೂರ್ವದಲ್ಲಿ ಹಿರಿಯರು, ದೇಶಭಕ್ತರು ವ್ಯವಸ್ಥೆ ಬದಲಾವಣೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಇಂದು ಬ್ರಷ್ಟಾಚಾರವೆಂಬ ಇನ್ನೊಂದು ಗಂಭೀರ ಸ್ವರೂಪದ ಸಮಸ್ಯೆಯಿಂದ ಮುಕ್ತಿ ಹೊಂದಲು ಹೋರಾಟ ನಡೆಸುತ್ತಿದ್ದೇವೆ ಎಂದರು.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಆರ್ಥಿಕತೆ, ಸ್ವಾವಲಂಬನೆ ಹಾಗೂ ಜೀವನ ಮಟ್ಟ ಸುಧಾರಣೆ ವಿಷಯದಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಗಳು ನಡೆದಿದೆ ಜನರಲ್ಲಿ ದೇಶಾಭಿಮಾನ ಮೂಡಿಸುವ, ಸಂಸ್ಕಾರ ರೂಪಿಸುವ ಶಿಕ್ಷಣ ಕಾಡ್ದಯವಾಗಬೇಕು. ಭ್ರಷ್ಟಾಚಾರ, ಭಯೋತ್ಪಾದನೆಗಳು ನಿರ್ಮೂಲನೆಗೊಳ್ಳಬೇಕು ಎಂದು ಶಂಕರಮೂರ್ತಿ ಹೇಳಿದರು.
ಸಮಾವೇಶದಲ್ಲಿ ‘ಯಶಸ್ಸಿನತ್ತ ಹೆಜ್ಜೆ’ ಕ್ರಿಯಾಯೋಜನೆಯನ್ನು ಬಿಡುಗಡೆಗೊಳಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ ರಾಜ್ಯದಲ್ಲಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರಕಾರದ ಅವಧಿಯಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಪ್ರಸ್ತಾವಿಸಿರುವಂತೆ 700 ಶಿಕ್ಷಣ ಸಂಸ್ಥೆಗಳನ್ನು ಅನುದಾನಿತ ಶಾಲೆಗಳ ವ್ಯಾಪ್ತಿಗೆ ಸೇರಿಸಲಾಗಿದ್ದು, ಪ್ರಸ್ತುತ 1991 ತನಕದ 307 ಶಾಲೆಗಳಿಗೆ ಅನುದಾನ ಒದಗಿಸಲು ನಿರ್ಧರಿಸಲಾಗಿದೆ ಎಂದರು.
ಮುಂದಿನ ಹಂತದಲ್ಲಿ 1995 ತನಕದ ಅರ್ಹ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು. ಶೈಕ್ಷಣಿಕ ಫಲಿತಾಂಶದಲ್ಲಿ ಉತ್ತಮ ಹಿನ್ನೆಲೆ ಇರುವ ದ. ಕನ್ನಡ ಜಿಲ್ಲೆ ಎಸೆಸೆಲ್ಸಿಯಲ್ಲಿ 21ನೇ ಸ್ಥಾನ ತಲುಪಿರುವುದು ಚಿಂತನಾರ್ಹ ಸಂಗತಿ. ಬಹಳ ಹಿಂದಿನಿಂದಲೇ ಈ ಜಿಲ್ಲೆ ಸುಶಿಕ್ಷಿತ ಪೋಷಕ ವರ್ಗವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತೆ ಹೆಚ್ಚಿನ ಯಶಸ್ಸು ಪಡೆಯಬೇಕು ಎಂದವರು ಆಶಿಸಿದರು.
ಭಾರತದಲ್ಲಿ ಉತ್ತಮ ಶಿಕ್ಷಣ ಪಡೆದವರು ಅಮೆರಿಕದಂತಹ ದೇಶದಲ್ಲಿ ಉನ್ನತ ವಿಭಾಗಗಳಲ್ಲಿ ದುಡಿಯುತ್ತಿದ್ದಾರೆ. ದೇಶದ ಪ್ರತಿಭಾವಂತರಿಗೆ ಇಲ್ಲಿಯೇ ಉತ್ತಮ ಭವಿಷ್ಯ ಕಂಡುಕೊಳ್ಳಲು ಪೂರಕ ವಾತಾವರಣ ಸೃಷ್ಟಿ ಅಗತ್ಯ ಎಂದರು.
ಅತ್ಯುತ್ತಮ ಸಾಧಕ, ವಿಶಿಷ್ಟ ಸಾಧಕ ವಿದ್ಯಾರ್ಥಿಗಳು ಹಾಗೂ ಶೇ. 100 ಫಲಿತಾಂಶ ತಂದ ಶಾಲೆಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವಿಧಾನಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ನಿಕ್ ಪ್ರಸ್ತಾವನೆಗೈದರು.
ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಗದಗ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ವಿಧಾನಸಭೆ ಉಪ ಸಭಾಧ್ಯಕ್ಷ ಎನ್. ಯೋಗೀಶ್ ಭಟ್, ಶಾಸಕ ಯು. ಟಿ. ಖಾದರ್, ಜಿ. ಪಂ. ಅಧ್ಯಕ್ಷೆ ಕೆ. ಟಿ. ಶೈಲಜಾ ಭಟ್, ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ್ ಕಟೀಲು, ಎಂ.ಆರ್.ಪಿ.ಎಲ್ ಮಹಾಪ್ರಬಂಧಕ ಸುಶೀಲ್‌ಚಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ (ಮಂಗಳೂರು) ಉಪ ನಿರ್ದೇಶಕ ಮೋಸೆಸ್ ಜಯಶೇಖರ್, ಸಿಟಿಇ ಪದ ನಿಮಿತ್ತ ಸಹನಿರ್ದೇಶಕಿ ಫಿಲೋಮಿನಾ ಲೋಬೋ, ಡಯಟ್ ಪ್ರಾಂಶುಪಾಲ ಡಿ. ಪಾಲಾಕ್ಷಪ್ಪ ಅವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English