ತುಳುಭಾಷೆಯ ಮಾನ್ಯತೆಗಾಗಿ ಕರಾಳ ದಿನ ಆಚರಣೆ

3:11 PM, Friday, October 27th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

tulu language ಮಂಗಳೂರು: ಕರಾವಳಿಯ ಒಂದು ಲಕ್ಷ ಜನ ಭಾಷಾ ಮಾನ್ಯತೆಗಾಗಿ ಟ್ವೀಟ್ ಅಭಿಯಾನ ನಡೆಸಿ ಪ್ರಧಾನಿ ಮೋದಿ ಗಮನ ಸೆಳೆಯಲು ಯತ್ನಿಸಲಿದ್ದಾರೆ. 8ನೇ ಪರಿಚ್ಛೇದಕ್ಕೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು  ಸೇರಿಸಬೇಕೆಂಬ ಬೇಡಿಕೆ‌ ಜೋರಾಗಿದೆ.   ಇನ್ನೊಂದೆಡೆ ತುಳು ಸಂಘಟನೆಗಳು ಕನ್ನಡ ರಾಜ್ಯೋತ್ಸವದಂದು ‘ಕರಾಳ ದಿನಾಚರಣೆ’ಗೆ ಕರೆ ನೀಡಿವೆ. ತುಳುಭಾಷೆಯ ಮಾನ್ಯತೆಗಾಗಿ #TuluTo8thShedule ಎನ್ನುವ ಹ್ಯಾಷ್ ಟ್ಯಾಗ್ ಮೂಲಕ‌ ಟ್ವೀಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕರಾವಳಿಯ ಲಕ್ಷಾಂತರ ಟ್ವೀಟರಿಗರು ಈ ಹೋರಾಟದಲ್ಲಿ ಕೈ ಜೋಡಿಸಲಿದ್ದಾರೆ.

ಅತೀ ಪುರಾತನ ಭಾಷೆಯಾದ ತುಳುವಿಗೆ ಕಳೆದ 60 ವರ್ಷಗಳಿಂದ ಸಾಂವಿಧಾನಿಕ ಮಾನ್ಯತೆ ದೊರೆತಿಲ್ಲ. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿದ್ದಲ್ಲಿ ಇಡೀ ತುಳುನಾಡಿನ ಸಂಸ್ಕೃತಿ ಉಳಿಯುವುದರೊಂದಿಗೆ ಹಲವು ಸೌಲಭ್ಯ, ಅಭಿವೃದ್ಧಿ ಕಾರ್ಯ ನಡೆಸಲು ಸಹಾಯವಾಗಲಿದೆ. ಮಾತ್ರವಲ್ಲದೇ, ಪಾರ್ಲಿಮೆಂಟ್ ನಲ್ಲೂ ತುಳು ಭಾಷೆ ರಾರಾಜಿಸಲಿದೆ ಎನ್ನುವುದು ತುಳುವರ ವಾದ.

ನವೆಂಬರ್ 1ರಂದೇ ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಈ ಅಭಿಯಾನ ನಡೆಯಲಿದ್ದು, ತುಳುನಾಡಿನ ಪ್ರತಿಯೊಬ್ಬರೂ ಇದಕ್ಕೆ ಸ್ಪಂದನೆ ನೀಡಬೇಕೆನ್ನುವ ನಿಟ್ಟಿನಲ್ಲಿ ಈಗಾಗಲೇ ಫೇಸ್ ಬುಕ್, ವಾಟ್ಸ್ ಅಪ್, ಟ್ವಿಟ್ಟರ್ ನಲ್ಲಿ ಜನರನ್ನು ಸೆಳೆಯುವಂತಹ ಪ್ರಕ್ರಿಯೆಗಳು ನಡೆಯುತ್ತಿವೆ. ಒಂದೆಡೆ ಬೇಡಿಕೆಯ ಕಾವು ಜಾಸ್ತಿಯಾಗುತ್ತಿದ್ದಂತೆಯೇ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕೂಡಾ ತುಳು‌ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ಒತ್ತಾಯ ಮಾಡಿದ್ದಾರೆ. ಅಕ್ಟೋಬರ್ 29 ರ ಪ್ರಧಾನಿ ಭೇಟಿ ವೇಳೆ ಈ ವಿಚಾರವನ್ನು ಪ್ರಸ್ತಾಪಿಸೋದಾಗಿ ಹೇಳಿದ್ದಾರೆ. ಇದೆಲ್ಲದರ ನಡುವೆ ತುಳು‌ಭಾಷೆಯ ರಕ್ಷಣೆಯ ನೆಪವೊಡ್ಡಿ ಕೆಲ ಸಂಘಟನೆಗಳು ‌ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಬದಲಾಗಿ ಕರಾಳ ದಿನ ಆಚರಿಸಲು ಸಿದ್ಧತೆ ನಡೆಸಿದ್ದು,ಕೇವಲ ಪ್ರಚಾರದ ದೃಷ್ಟಿಯಿಂದ ಈ ಗಿಮಿಕ್ ಮಾಡಲಾಗಿದೆ ಎನ್ನುವುದು ನಾಗರಿಕರ ಅಭಿಪ್ರಾಯವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English