ಮಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‌ಲೈನ್-1098 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವರೇ ತೆರೆದ ಮನೆ ಎಂಬ ಕಾರ್ಯಕ್ರಮ ಮುಡಿಪು ಶ್ರೀ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಮಕ್ಕಳು ಹಾಗೂ ಅತಿಥಿಗಳಿಂದ ಚೈಲ್ಡ್‌ಲೈನ್‌ನ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು,
ಚೈಲ್ಡ್‌ಲೈನ್-1098 ನಗರ ಸಂಯೋಜಕ ಯೋಗೀಶ್ ಮಲ್ಲಿಗೆಮಾಡು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಚೈಲ್ಡ್‌ಲೈನ್ ದಿನದ 24ಗಂಟೆಯೂ ಕಾರ್ಯನಿರತವಾಗಿರುತ್ತದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಆನೇಕ ತೆರೆದ ಮನೆ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಪ್ರಸ್ತುತ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ, ಪೋಷಣೆ, ರಕ್ಷಣೆಯ ಸಹಾಯದ ಅಗತ್ಯವಿರುವ ಮಕ್ಕಳು ಸದುಪಯೋಗವನ್ನು ಪಡೆಯುವಂತೆ ತಿಳಿಸಿ, ಕಾರ್ಯಚಟುವಟಿಕೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಭೆಯನ್ನುದ್ಧೇಶಿಸಿ ಮಕ್ಕಳ ಬಗ್ಗೆ ಹೆತ್ತವರು ಕಾಳಜಿ ವಹಿಸುವುದರೊಂದಿಗೆ ಪ್ರತಿದಿನ ಸಂಪರ್ಕದಲ್ಲಿದ್ದು, ಆಪ್ತವಾಗಿ ಮಾತನಾಡಿ, ಅವರ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಸರಿ ತಪ್ಪುಗಳನ್ನು ತಿಳಿ ಹೇಳಿ, ಬಾಲ್ಯದಲ್ಲಿಯೇ ಅವರನ್ನು ತಿದ್ದುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡೋಣ, ’ಮನೆಯೇ ಮೊದಲ ಪಾಠ ಶಾಲೆ, ಜನನಿಯೇ ಮೊದಲ ಗುರು’ ಎಂದು ಕೋಣಾಜೆ ಪೊಲೀಸ್ ಠಾಣೆಯ ಪಿಎಸೈ ಗುರಪ್ಪ ಕಂಠಿ ಹೇಳಿದರು. ಬಾಲ ನ್ಯಾಯ ಕಾಯಿದೆ ಬಗ್ಗೆ ಮಾಹಿತಿ ನೀಡಿ, ಗಾಂಜಾ, ಡ್ರಗ್ಸ್, ಮಾದಕ ವಸ್ತು ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವಂತೆ, ಅಪರಾಧಗಳು ನಡೆದಾಗ ಹಾಗೂ ಸಂಶಯಿತ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ನೀಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾಗಿದ್ದು, ಮಕ್ಕಳು ಮಹಿಳೆಯರು ಭಯಮುಕ್ತರಾಗಿ ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಮಕ್ಕಳಿಗೆ ಜಂಕ್ ಫುಡ್, ಪಾಸ್ಟ್ ಫುಡ್‌ಗಳನ್ನು ನೀಡಬೇಡಿ, ಸ್ಥಳೀಯ ಪ್ರದೇಶದಲ್ಲಿ ಕಾಲಕ್ಕೆ ಅನುಗುಣವಾಗಿ ಬೆಳೆಯುವ ತರಕಾರಿ, ಸೊಪ್ಪು, ಹಣ್ಣು ಹಂಪಲು, ಬೇಳೆ ಕಾಳು, ಮೊಳಕೆ ಬರಿಸಿದ ಕಾಳು, ಹಾಲು ಮೊಸರು ಹೀಗೆ ಪೌಷ್ಟಿಕಾಂಶವಿರುವ ಆಹಾರವನ್ನೇ ಮಕ್ಕಳಿಗೆ ನೀಡಿ, ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಇದೆ, ಪೌಷ್ಟಿಕಾಂಶಯುಕ್ತ ಆಹಾರ ಪದ್ಧತಿಯಿಂದ ರೋಗ ಮುಕ್ತ ಜೀವನ ನಡೆಸಬಹುದು, ಆರೋಗ್ಯವೇ ಭಾಗ್ಯ ಎಂಬಂತೆ ಮಕ್ಕಳ ಬೆಳವಣಿಗೆಯಲ್ಲಿ ಆರೋಗ್ಯದ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ದುಶ್ಚಟಗಳಿಗೆ ಬಲಿ ಬೀಳದಂತೆ ಪೋಷಕರು ಎಚ್ಚರವಹಿಸಬೇಕು, ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯ ರೋಗ ಹರಡದಂತೆ, ಮುಂಜಾಗ್ರತೆಯಾಗಿ, ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸುವಂತೆ, ಪರಿಸರ ಸ್ವಚ್ಛತೆ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಜಯರಾಮ ಪೂಜಾರಿ ಮಾಹಿತಿಯನ್ನು ನೀಡಿದರು. ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಬಾಲ್ಯವಿವಾಹ, ಪೋಷಕತ್ವ ಸಹಾಯ ಧನ, ಮಗುವನ್ನು ದತ್ತು ಪಡೆಯುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕುಮಾರ್ ಶೆಟ್ಟಿಗಾರ್ ಮಾಹಿತಿಯನ್ನು ನೀಡಿದರು.
ಚೈಲ್ಡ್‌ಲೈನ್‌ನ ಜಯಂತಿ ಕೋಕಳ ಗುಂಪು ಚರ್ಚೆಯನ್ನು ಹಾಗೂ ಕ್ರೋಢಿಕೃತ ಅಂಶಗಳನ್ನು ರೇವತಿ ಹೊಸಬೆಟ್ಟು ಸಭೆಯ ಮುಂದೆ ಮಂಡಿಸಿದರು, ನಾಗರಾಜ್ ಪಣಕಜೆ ಚೈಲ್ಡ್‌ಲೈನ್-1098ಗೆ ಕರೆಯನ್ನು ಮಾಡುವುದರ ಮೂಲಕ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀ ಭಾರತಿ ಅನುದಾನಿತ ಶಾಲಾ ಸಂಚಾಲಕ ಕೆ.ಎಸ್.ಭಟ್, ಎಸ್‌ಡಿಎಂಸಿ ಅಧ್ಯಕ್ಷ ವಿರೇಶ್, ಮುಖ್ಯ ಶಿಕ್ಷಕ ಕೆ.ರಾಮಕೃಷ್ಣ ಭಟ್, ಅಂಗನವಾಡಿ ಶಿಕ್ಷಕಿ ಕೆ.ಹೇಮಲತಾ ಉಪಸ್ಥಿತರಿದ್ದರು. ಭಾರತಿ ಶಾಲೆಯ ಶಿಕ್ಷಕರುಗಳು, ವಿಧ್ಯಾರ್ಥಿಗಳು, ಪೋಷಕರು, ಸ್ತೀಶಕ್ತಿ, ಸ್ವ-ಸಹಾಯ ಸಂಘದ ಸದಸ್ಯರುಗಳು, ಸಾರ್ವಜನಿಕರು ಭಾಗವಹಿಸಿದ್ದು, ಈ ಕಾರ್ಯಕ್ರಮವನ್ನು ಶ್ರೀ ಭಾರತಿ ಶಾಲೆಯ ಶಿಕ್ಷಕಿ ಕು|| ಅನೂಷ ನಿರೂಪಿಸಿ, ಶಿಕ್ಷಕಿ ವಿಜಯಲಕ್ಷ್ಮೀ ವಂದಿಸಿದರು.
Click this button or press Ctrl+G to toggle between Kannada and English