ಮಂಗಳೂರು: ಎಂಆರ್‌ಪಿಎಲ್‌ನ 23ನೇ ವಾರ್ಷಿಕ ಮಹಾಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಂಸ್ಥೆ ಯ ಅಧ್ಯಕ್ಷ ಎ.ಕೆ.ಹಝಾರಿಕಾ ಎಂಆರ್‌ಪಿಎಲ್‌ನ ಮೂರನೇ ಹಂತದ ಕಾಮಗಾರಿ 2012 ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದ್ದು , ಜೂನ್‌ನಿಂದ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಹೇಳಿದರು.
ಘಟಕದ ಸಂಸ್ಕರಣಾ ಸಾಮರ್ಥ್ಯವನ್ನು 15 ಎಂಎಂಟಿಪಿಎಗೆ (ಈಗ 12 ಎಂಎಂಟಿಪಿಎ) ಏರಿಸುವ ಮೂರನೇ ಹಂತದ ಕಾಮಗಾರಿ ಆಗಸ್ಟ್ 15ಕ್ಕೆ ಶೇ.86.26ರಷ್ಟು (ಶೇ.97.4 ನಿಗದಿತ ಗುರಿ) ಪೂರ್ಣಗೊಂಡಿದೆ. ಕೆಲವೊಂದು ಸ್ಥಳೀಯ ಸಮಸ್ಯೆಗಳಿಂದಾಗಿ ಕಾಮಗಾರಿಯಲ್ಲಿ ವಿಳಂಬವಾಗಿದ್ದು , ಮುಂದಿನ ದಿನಗಳಲ್ಲಿ ಅದನ್ನು ಸರಿದೂಗಿಸಿ ವೇಗದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. 2012 ಜನವರಿ/ ಫೆಬ್ರವರಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಜೂನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಲಿದೆ ಎಂದು ವಿವರಿಸಿದರು.
ಇರಾನ್‌ನಿಂದ ಕಚ್ಚಾ ತೈಲ ಖರೀದಿ ಮುಂದುವರಿಯಲಿದೆ. ಇರಾನ್‌ಗೆ ಹಣ ಪಾವತಿ ಸಂಬಂಧ ಉದ್ಭವಿಸಿದ್ದ ಸಮಸ್ಯೆ ಬಗೆಹರಿದಿದೆ. ಸದ್ಯ ಯಾವುದೇ ಸಮಸ್ಯೆ ಉಳಿದಿಲ್ಲ. ಇದೇ ಹೊತ್ತಿನಲ್ಲಿ ತೈಲ ಖರೀದಿಗೆ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚಿಂತನೆ ನಡೆದಿದೆ. ಸದ್ಯ ಇರಾನ್‌ನಿಂದ 7 ಮಿಲಿಯನ್ ಟನ್ ಹಾಗೂ ಕುವೈಟ್‌ನಿಂದ 1 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಖರೀದಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೊಡ್ಡ ಪ್ರಮಾಣದ ಕ್ರೂಡ್ ಕ್ಯಾರಿಯರ್‌ನಲ್ಲಿ ಬರುವ ಕಚ್ಚಾ ತೈಲವನ್ನು ಸ್ವೀಕರಿಸಲು ಎನ್‌ಎಂಪಿಟಿ ಸಮೀಪ ಸಿಂಗಲ್ ಪಾಯಿಂಟ್ ಮೂರಿಂಗ್ ವ್ಯವಸ್ಥೆಗೆ (ಎಸ್‌ಪಿಎಂ) ಈಗಾಗಲೇ ಸಿದ್ದತೆಗಳನ್ನು ನಡೆಸಲಾಗಿದೆ. ನವೆಂಬರ್‌ನಲ್ಲಿ ಇದರ ಕಾಮಗಾರಿ ಆರಂಭಗೊಳ್ಳಲಿದೆ.
ಬಹುತೇಕ 2012ರ ಮೇ ತಿಂಗಳ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಕಾಮಗಾರಿಯಿಂದ ಮೀನುಗಾರಿಕೆಗೆ ಯಾವುದೇ ರೀತಿಯ ಅಪಾಯವೂ ಇಲ್ಲ ಎಂದು ಸ್ಪಷ್ಟೀಕರಿಸಿದರು.
ತೈಲ ಮಾರಾಟದ ಚಿಲ್ಲರೆ ಮಳಿಗೆಗಳನ್ನು ಸ್ಥಾಪಿಸುವ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ 2 ವರ್ಷಗಳಲ್ಲಿ 87 ಕೋ.ರೂ. ವೆಚ್ಚದಲ್ಲಿ 122 ಮಳಿಗೆಗಳನ್ನು ಆರಂಭಿಸಲು ಚಿಂತನೆ ನಡೆದಿದೆ ಎಂದು ಅವರು ನುಡಿದರು.
ವಿಮಾನ ಇಂಧನ ಪೂರೈಕೆಯಲ್ಲಿ ಸಂಸ್ಥೆ ಉತ್ತಮ ಸಾಧನೆಯನ್ನು ಮಾಡಿದೆ. ಸದ್ಯ ಬೆಂಗಳೂರು, ಮಂಗಳೂರು, ಹೈದರಾಬಾದ್, ಆಹ್ಮದಾಬಾದ್, ಕಲ್ಲಿಕೋಟೆ ವಿಮಾನ ನಿಲ್ದಾಣಗಳಿಗೆ ಇಂಧನ ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಂಬೈ, ಹೊಸದಿಲ್ಲಿ ಹಾಗೂ ಇತರ ವಿಮಾನ ನಿಲ್ದಾಣಗಳನ್ನು ಈ ಸಂಬಂಧ ಸಂಪರ್ಕಿಸಲಾಗುವುದು ಎಂದು ಹೇಳಿದರು.
ಎಂಆರ್‌ಪಿಎಲ್‌ನ ಮಹಾಸಭೆಯಲ್ಲಿ ಷೇರುದಾರರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲು ಒಪ್ಪಿಗೆ ನೀಡಲಾಯಿತು. ಸಂಸ್ಥೆ 2010 -11ನೇ ಸಾಲಿನಲ್ಲಿ ಸಾರ್ವಕಾಲಿಕ ದಾಖಲೆಯ 43,800 ಕೋ.ರೂ. ವಾರ್ಷಿಕ ವಹಿವಾಟು ನಡೆಸಿದೆ. 1,177 ಕೋ.ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಸ್ಥೆ ಉತ್ಪಾದನೆ, ಪರಿಸರ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಹಲವು ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.
ಸಂಸ್ಥೆ ಆಡಳಿತ ನಿರ್ದೇಶಕ ಯು.ಕೆ. ಬಸು , ನಿರ್ದೇಶಕ ( ತಾಂತ್ರಿಕ) ಪಿ.ಪಿ.ಉಪಾಧ್ಯ , ನಿರ್ದೇಶಕ ( ಹಣಕಾಸು) ವಿಷ್ಣು ಅಗರ್‌ವಾಲ್ ಉಪಸ್ಥಿತರಿದ್ದರು. ಕೃಪೆ : ಉದಯವಾಣಿ
Click this button or press Ctrl+G to toggle between Kannada and English