ಮಂಗಳೂರು:ಸಂಸ್ಕೃತದಲ್ಲಿ ಹೇಳಿದಂತೆ ಅವರು ನಿಷ್ಕಾಮ ಕರ್ಮಯೋಗಿ ಎಂದು ಧರ್ಮಸ್ಥಳ ಧರ್ಮಾಧಿಕಾರಿಯನ್ನು ಪ್ರಧಾನಿ ಮೋದಿ ಬಣ್ಣಿಸಿದರು. ವೀರೇಂದ್ರ ಹೆಗ್ಗಡೆಯವರ 50 ವರ್ಷದ ಸುದೀರ್ಘ ಸೇವೆ ಕೋಟ್ಯಂತರ ಜನರಿಗೆ ಪ್ರೇರಣೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ರುದ್ರಾಭಿಷೇಕ ನೆರವೇರಿಸಿದ ನಂತರ ಉಜಿರೆಯಲ್ಲಿ ನಡೆದ ರುಪೇ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಧರ್ಮಸ್ಥಳದ ನನ್ನ ಪ್ರೀತಿಯ ಅಭಿಮಾನಿಗಳಿಗೆ ಅಭಿನಂದನೆಗಳು. ಹೆಗ್ಗಡೆಯವರ 50 ವರ್ಷಗಳ ಸಾಧನೆ ಬಣ್ಣನೆಗೆ ನಿಲುಕದ್ದು. ಅವರನ್ನು ಗೌರವಿಸುವ ಕ್ಷಣ ನನಗೆ ಸೌಭಾಗ್ಯ. ಅವರು ಮುಂದೆಯೂ ಹಲವು ವರ್ಷ ಬಾಳಿ ಬದುಕುಬೇಕು. ಅವರ ಭೇಟಿಯಿಂದ ನನ್ನಲ್ಲಿ ಹೊಸ ಉತ್ಸಾಹ ಮೂಡಿದೆ ಎಂದರು.
ಕೆಲವರು ಇಂಡಿಯಾದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ ಹೆಗ್ಗಡೆಯವರು 12 ಲಕ್ಷ ಸದಸ್ಯರಿಗೆ ರುಪೇ ಕಾರ್ಡ್ ವಿತರಿಸುವ ಮೂಲಕ ಕ್ಯಾಶ್ ಲೆಸ್ ವಿಚಾರದಲ್ಲಿ ಮೈಲಿಗಲ್ಲು ನೆಟ್ಟಿದ್ದಾರೆ. ಅವರ ಸೇವೆ ಶ್ಲಾಘನೀಯ. ಹಾಗೆಯೇ ಕ್ಯಾಶ್ ಲೆಸ್ ಅಭಿಯಾನಕ್ಕೆ ಜನರು ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.
ಧರ್ಮಸ್ಥಳ ಕ್ಷೇತ್ರದ ಸಾಧನೆ ಬಗ್ಗೆ ಅರ್ಥ ಶಾಸ್ತ್ರಜ್ಞರು ಅಧ್ಯಯನ ನಡೆಸುವಂತ ಸಾಧನೆಗಳಾಗಿವೆ. ಈ ಸಾಧನೆಯ ಹಿಂದೆ ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಹಾಗೂ ವೀರೇಂದ್ರ ಹೆಗ್ಗಡೆಯವರ ಪಾತ್ರ ಮಹತ್ವದ್ದಾಗಿದೆ.
ಮಂಗಳೂರಿನಲ್ಲಿ ಕರಾವಳಿ ಪ್ರದೇಶವಿದ್ದು, ಅಲ್ಲಿರುವ ಮೀನುಗಾರರಿಗೆ ಕೆಲವೇ ತಿಂಗಳುಗಳ ಕಾಲ ಕೆಲಸವಿರುತ್ತೆ. ಅದಕ್ಕಾಗಿ ಅವರಿಗೆ ವಿಶೇಷ ಯೋಜನೆ ರೂಪಿಸಿ ವರ್ಷಪೂರ್ತಿ ಅವರಿಗೆ ಕೆಲಸ ದೊರಕುವಂತೆ ಮಾಡಲಾಗುತ್ತದೆ. ಸಮುದ್ರ ಕಳೆಯಿಂದ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡುವ ಉದ್ದೇಶವಿದೆ ಎಂದು ಹೇಳಿದರು.
ಅಧಿಕಾರದಲ್ಲಿರುವಾಗಲೇ ಧರ್ಮಸ್ಥಳಕ್ಕೆ ಬಂದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೋದಿ, ಬೆಳಗ್ಗಿನಿಂದಲೇ ಉಪವಾಸದಲ್ಲಿದ್ದರು. ಮೋದಿ ಕೇಸರಿ ವಸ್ತ್ರ ತೊಟ್ಟು ಮಂಜುನಾಥನ ದರ್ಶನ ಪಡೆದರು. ಬಳಿಕ ರುದ್ರಾಭಿಷೇಕ ಪೂಜೆ ಸಲ್ಲಿಸಿದರು. ಇದೇ ವೇಳೆ ಅಣ್ಣಪ್ಪಸ್ವಾಮಿ, ಮಹಾಗಣಪತಿಗೆ, ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಒಣಹಣ್ಣು ಹಾಗೂ ಎಳನೀರು ಸ್ವೀಕರಿಸಿದರು. ಜಮೀಲಾ ಬಾನು, ಶಾಲಿನಿ ಇಬ್ಬರು ಸದಸ್ಯರಿಗೆ ಮೋದಿ ಕಾರ್ಯಕ್ರಮದಲ್ಲಿ ರೂಪೇ ಕಾರ್ಡ್ ವಿತರಿಸಿದರು.
Click this button or press Ctrl+G to toggle between Kannada and English