ಉಡುಪಿ: ಅಹೋರಾತ್ರಿ ಹೋರಾಟ ನಡೆಸುತ್ತಿರುವ ಉಪ್ಪಿನಕುದ್ರುವಿನ ಗೊಂಬೆಯಾಟ ಅಕಾಡೆಮಿ, ಉಪ್ಪಿನಕುದ್ರು ಎನ್ನುವ ಸಣ್ಣ ಗ್ರಾಮವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದ ಹಾಗೂ ಪಾರಂಪರಿಕ ಕಲೆ ಇದೀಗ ಸ್ಥಳೀಯರ ನಿರ್ಲಕ್ಷ್ಯಕ್ಕೆ ಒಳಗಾಯಿತೇ ಅಥವಾ ಮೆಸ್ಕಾಂ ಇಲಾಖೆಯ ಸರ್ವಾಧಿಕಾರಿ ಧೋರಣೆಗೆ ಬಲಿಪಶುವಾಯಿತೇ ಎನ್ನುವ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.
ಮೊದಲು ಕಟ್ಟಡ ನಿರ್ಮಾಣಕ್ಕಾಗಿ ಸಿ.ಆರ್.ಝಡ್., ನಂತರ ಕೊಡುಗೆಯಾಗಿ ಬಂದ ಬಸ್ಸಿನ ಪರವಾನಗಿಗಾಗಿ ಸಾರಿಗೆ ಇಲಾಖೆ… ಹೀಗೆ ಹಲವು ಸಮಸ್ಯೆ ಅಕಾಡೆಮಿಯನ್ನು ಬೇತಾಳದಂತೆ ಕಾಡಿತ್ತು. ಆ ಸಮಸ್ಯೆಗಳ ಹಿಂದೆ ಹೋರಾಡಿ ಒಂದು ತಾತ್ವಿಕ ಅಂತ್ಯವನ್ನು ಕಂಡಿರುವ ಅಕಾಡೆಮಿಯ ಮುಖ್ಯಸ್ಥರಿಗೆ, ಇದೀಗ ಪ್ರತ್ಯೇಕ್ಷವಾಗಿರುವ ಸಮಸ್ಯೆಗೆ ಕಾರಣವಾಗಿರುವುದು ಮೆಸ್ಕಾಂ ಇಲಾಖೆಯ ಕಾರ್ಯ ನಿರ್ವಹಣೆ.
ಅಕಾಡೆಮಿಯ ಕಟ್ಟಡಕ್ಕಾಗಿ ಮೆಸ್ಕಾಂಗೆ ಹಣ ತುಂಬಿ ಕಾಂಪೌಂಡ್ ಒಳಗೆ ವಿದ್ಯುತ್ ಕಂಬವನ್ನು ಅಳವಡಿಸಿ ಸಂಪರ್ಕವನ್ನು ಪಡೆದುಕೊಳ್ಳಲಾಗಿತ್ತು. ‘ಶಾಲೆ ಕಡೆಗೆ ಗೊಂಬೆ ನಡೆಗೆ’ ಎನ್ನುವ ಕಾರ್ಯಕ್ರಮದ ಸಂಯೋಜನೆ ಮಾಡಿದ್ದ ಅಕಾಡೆಮಿಯವರು ಈ ಉದ್ದೇಶಕ್ಕಾಗಿ ಗೇಟ್‌ಗೆ ಬೀಗ ಹಾಕಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕಾಂಪೌಂಡ್ ಗೋಡೆಗಳನ್ನು ಹಾರಿ ಈ ವಿದ್ಯುತ್ ಕಂಬದಿಂದ ದಾರಿ ದೀಪದ ಅಳವಡಿಕೆಯ ಸಂಪರ್ಕಕ್ಕಾಗಿ ವಿದ್ಯುತ್ ಲೈನ್ ಎಳೆಯಲಾಗಿದೆ. ಈ ಲೈನ್ ನಿರ್ಮಾಣ ಹಂತದಲ್ಲಿ ಇರುವ ಅಕಾಡೆಮಿಯ ಸ್ವಾಗತ ಗೋಪುರದ ಸನಿಹದಲ್ಲಿಯೇ ಹೋಗುತ್ತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಈ ರೀತಿ ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ಪಂಚಾಯಿತಿಯಲ್ಲಿ ನಿರ್ಣಯ ಆಗಿದೆ ಎನ್ನುವ ಉತ್ತರ ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ ಎನ್ನುವುದು ಅಕಾಡೆಮಿಯವರ ಮಾತು.
ಖಾಸಗಿ ಜಾಗದಲ್ಲಿ ಇರುವ ಕಂಬಗಳಿಗೆ ಹೆಚ್ಚುವರಿ ಸಂಪರ್ಕವನ್ನು ಅಳವಡಿಸಬೇಕಾದರೆ ಜಾಗದ ಮಾಲಿಕರ ಒಪ್ಪಿಗೆ ಪಡೆಯಬೇಕು ಎನ್ನುವ ಕನಿಷ್ಠ ಸೌಜನ್ಯವನ್ನು ಮರೆತಿರುವ ಇಲಾಖೆ ಇದಕ್ಕೆ ಹೇಳುವ ಕಾರಣವೇ ಬೇರೆ. ಕಂಂಪೌಂಡ್ ನಿರ್ಮಾಣದ ವೇಳೆ ರಸ್ತೆ ಜಾಗವನ್ನೆ ಒತ್ತುವರಿ ಮಾಡಿದ್ದಾರೆ ಎನ್ನುವ ಆರೋಪಗಳನ್ನು ಬೊಟ್ಟು ಮಾಡುತ್ತಿದ್ದಾರೆ. ಒತ್ತುವರಿಯನ್ನು ನಿರ್ಣಯಿಸಬೇಕಾದವರು ಯಾರು ಕಂದಾಯ ಹಾಗೂ ಸರ್ವೇ ಇಲಾಖೆಯವರಾ ಅಥವಾ ಬೇರೆ ಇಲಾಖೆಯವರಾ ಎನ್ನುವ ಜತೆ ವಿದ್ಯುತ್ ಕಂಬವನ್ನು ಹೂಳುವ ಮೊದಲು ಈ ಒತ್ತುವರಿಯ ಬಗ್ಗೆ ಇಲಾಖಾಧಿಕಾರಿಗಳು ಮೌನಿಯಾಗಲು ಕಾರಣಗಳೇನು ಎನ್ನುವ ಪ್ರಶ್ನೆಗಳನ್ನು ಸ್ಥಳೀಯರು ಕೇಳುತ್ತಿದ್ದಾರೆ.
ಅಂದಾಜು 6 ತಲೆಮಾರಿನ ನಂಟಿರುವ ಉಪ್ಪಿನಕುದ್ರುವಿನ ದೇವಣ್ಣ ಕೊಗ್ಗ ಕಾಮತ್‌ರ ಗೊಂಬೆಯಾಟ ತಂಡಕ್ಕೆ ಸುದೀರ್ಘ ಇತಿಹಾಸವಿದೆ. ಪ್ರಪಂಚದ 20ಕ್ಕೂ ಹೆಚ್ಚು ದೇಶಗಳಲ್ಲಿ ಈ ತಂಡ ಪ್ರದರ್ಶನ ನಡೆಸಿದೆ. ವಿಪ್ರೋ, ಇನ್ಫೊಸಿಸ್ ಕಂಪೆನಿಗಳ ಜತೆ ರಾಜ್ಯದ ಪ್ರಸಿದ್ಧ ಉದ್ಯಮಿಗಳು ಅಪರೂಪದ ಕಲೆಯ ಉಳಿವಿಗಾಗಿ ಸಹಕಾರ ನೀಡಿದ್ದಾರೆ. ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಭಾಸ್ಕರ್ ಕಾಮತ್ ಅವರು ಕಲೆಯ ಉಳಿವಿಗಾಗಿ ಉದ್ಯೋಗವನ್ನ ಬಿಟ್ಟು ಗೊಂಬೆಯಾಟದ ಸೂತ್ರಕ್ಕೆ ಕೈ ಜೋಡಿಸಿದ್ದಾರೆ. 2015 ರಲ್ಲಿ ಸ್ಥಾಪಿತವಾದ ಗೊಂಬೆಯಾಟ ಅಕಾಡೆಮಿ ಮೂಲಕ 100ಕ್ಕೂ ಅಧಿಕ ಜನರಿಗೆ ಗೊಂಬೆಯನ್ನಾಡಿಸುವ ಸೂತ್ರದ ಕಲೆಯನ್ನು ಕಲಿಸುವ ಪ್ರಯತ್ನ ನಡೆದಿದೆ. ಈ ಅಕಾಡೆಮಿ ಪಾರಂಪರಿಕ ಕಲೆಯ ಕಲಿಕೆಯ ಕೇಂದ್ರವಾಗಬೇಕು ಎನ್ನುವ ಸದುದ್ದೇಶಗಳನ್ನು ಅಳವಡಿಸಿಕೊಳ್ಳಲಾಗಿದೆ.
ಕರಾವಳಿಯ ಜಿಲ್ಲೆಗಳಲ್ಲಿ ಮರೆಯಾಗುತ್ತಿರುವ ಹತ್ತಾರು ಕಲಾ ಪ್ರಕಾರಗಳಲ್ಲಿ ‘ಸೂತ್ರದ ಗೊಂಬೆಯಾಟ ಕಲೆ’ ಯೂ ಒಂದು. ಹತ್ತಾರ ವಿಘ್ನಗಳನ್ನು ಎದುರಿಸಿ ಕಲೆಯ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಸಂಘಟಕರ ಮಾನಸಿಕ ಧೈರ್ಯ ಕುಗ್ಗವ ಮೊದಲೇ ಸ್ಥಳೀಯಾಡಳಿತ ಹಾಗೂ ಸರ್ಕಾರದ ಇಲಾಖೆ ಅವರ ನೆರವಿಗೆ ಮುಂದಾಗಬೇಕು. ಕಾನೂನಿನ ಇತಿ ಮಿತಿಯೊಳಗೆ ಸಮಸ್ಯೆಗೆ ಪರಿಹಾರದ ಸೂತ್ರವನ್ನು ಕಾಣುವ ಪ್ರಯತ್ನ ಮಾಡಬೇಕು ಎನ್ನುವ ಗೊಂಬೆಯಾಟದ ಅಭಿಮಾನಿಗಳು, ಒಂದು ವೇಳೆ ಸ್ವ ಪ್ರತಿಷ್ಠೆ ಮುಂದುವರೆದಲ್ಲಿ, ಮುಂದೊಂದು ದಿನ ಪರದೆಯ ಮೇಲೆ ಮಾತ್ರ ಈ ಪಾರಂಪರಿಕ ಕಲೆಯನ್ನು ಕಾಣುವ ದಿನಗಳು ಬರಬಹುದು ಎನ್ನುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Click this button or press Ctrl+G to toggle between Kannada and English