ಮಂಗಳೂರು: ಒಂದುವರೆ ವರ್ಷದ ಹಿಂದೆ ನಿಂತು ಹೋಗಿದ್ದ ಅಪ್ಪಟ ಜನಪದ ಕ್ರೀಡೆ ಕಂಬಳಕ್ಕೆನಿಷೇಧದ ಕರಿ ಛಾಯೆಯ ನಡುವೆ ಕರಾವಳಿಯಲ್ಲಿ ಮರು ಚಾಲನೆ ಸಿಕ್ಕಿದೆ. ಕರಾವಳಿಯಲ್ಲಿ ಮತ್ತೆ ಕೊಂಬು-ಕಹಳೆ, ಡೋಲಿನ ಸದ್ದು ಮತ್ತೆ ಮೊಳಗಲಾರಂಭಿಸಿದೆ. ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ನಿನ್ನೆ ಹೊನಲು ಬೆಳಕಿನ ನೇತ್ರಾವತಿ-ಶರಾವತಿ ಜೋಡು ಕೆರೆ ಕಂಬಳ ವೈಭವದಿಂದ ನಡೆದಿದೆ. ಬೆಳ್ತಂಗಡಿಯ ಕಡಿರುದ್ಯಾವರ ದಲ್ಲಿ ನಡೆಯುವ ನೇತ್ರಾವತಿ-ಶರಾವತಿ ಜೋಡುಕೆರೆ ಕಂಬಳ 8 ವರ್ಷದ ಹಿಂದೆ ನಡೆದು ಬಳಿಕ ಕಾರಣಾಂತರಗಳಿಂದ ನಿಂತು ಹೋಗಿತ್ತು. ಈ ಬಾರಿ ಮತ್ತೆ ಈ ಕಂಬಳ ಆರಂಭಗೊಂಡಿದ್ದು ಕಂಬಳಕ್ಕೆಂದು ವಿಶೇಷ ಕೆರೆ ನಿರ್ಮಿಸಲಾಗಿದೆ.
53 ಜೋಡಿ ಕೋಣ ಭಾಗಿ ಭಾನುವಾರ ನಡೆದ ಹೊನಲು ಬೆಳಕಿನ ನೇತ್ರಾವತಿ-ಶರಾವತಿ ಜೋಡು ಕೆರೆ ಕಂಬಳದಲ್ಲಿ 53 ಜೋಡಿ ಕೋಣಗಳು ಭಾಗವಹಿಸಿದ್ದವು. ಹಗ್ಗ ಕಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ಅಡ್ಡ ಹಲಗೆ, ನೇಗಿಲು ಕಿರಿಯ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.
ಒಂದೂವರೆ ವರ್ಷದ ಬಳಿಕ ಓಡಿದ ಕೋಣ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದ ಕಂಬಳ ಕರಾವಳಿಯ ಕೊನೆಯ ಕಂಬಳವಾಗಿತ್ತು. 2015-16 ರ ಮಾರ್ಚ್ 14 ರಂದು ಈ ಕಂಬಳ ನಡೆದಿತ್ತು. ಇದೀಗ ಕಂಬಳಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ನಿಷೇಧಾಜ್ಞೆ ತೆರವಾದ ಕಾರಣ ಕಡಿರುದ್ಯಾವರದಲ್ಲಿ ಭಾನುವಾರ ಕಂಬಳ ಆಯೋಜಿಸಲಾಗಿತ್ತು .
ರಂಜನ್ ಗೌಡ ಸಾರಥ್ಯದಲ್ಲಿ ಕಂಬಳ ಬೆಳ್ತಂಗಡಿ ತಾಲೂಕಿನ ಕಂಬಳ ಸಮಿತಿಯ ಗೌರವಾಧ್ಯಕ್ಷ ರಂಜನ್ ಜಿ ಗೌಡ ಅವರ ಸಾರಥ್ಯದಲ್ಲಿ ನಡೆದ ಈ ಕಂಬಳವನ್ನು ಕಂಬಳ ತೀರ್ಪುಗಾರರಾದ ಸದೀಶ್ ಕುಮಾರ್ ಆರಿಗ ಉದ್ಘಾಟಿಸಿದರು .
ನ. 11ರಂದು ವಿಜಯೋತ್ಸವ ಕಂಬಳ ಕಂಬಳದ ಮೇಲೆ ಹೇರಲಾಗಿದ್ದ ನಿಷೇಧಾಜ್ಞೆ ತೆರವಾದ ಬಳಿಕ ವಿಜಯೋತ್ಸವದ ಕಂಬಳ ಹಮ್ಮಿಕೊಳ್ಳಲಾಗಿದ್ದು ಇದೇ ನವೆಂಬರ್ 11 ಮತ್ತು 12 ರಂದು ಮೂಡಬಿದ್ರೆಯಲ್ಲಿ ಈ ಕಂಬಳ ನಡೆಯಲಿದೆ. ತುಳುನಾಡಿನ ಬಹುನಿರೀಕ್ಷಿತ ಈ ಮೂಡುಬಿದಿರೆಯ ಕೋಟಿ ಚೆನ್ನಯ್ಯ ವಿಜಯೋತ್ಸವ ಕಂಬಳಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ಹಲವಾರು ಮುಖಂಡರು ಸೆಲೆಬ್ರಿಟಿಗಳು ಆಗಮಿಸುವ ನಿರೀಕ್ಷೆಯಿದೆ.
Click this button or press Ctrl+G to toggle between Kannada and English