ಮಂಗಳೂರು :ತುಳುವರು ತಮ್ಮ ವಾಟ್ಸ್ಆ್ಯಪ್ ಪ್ರೊಫೈಲ್ ಚಿತ್ರವನ್ನು ಬ್ಲ್ಯಾಕ್ ಡೇ ಎಂದು ಹಾಕುವ ಮೂಲಕ ಕರಾಳ ದಿನವನ್ನಾಗಿಸಲು ಕರೆ ನೀಡಲಾಗಿದೆ. ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಕಳೆಗಟ್ಟಿದ್ದರೆ, ಕರಾವಳಿಯಲ್ಲಿ ಮಾತ್ರ ಇಂದು ಕರಾಳ ದಿನವನ್ನಾಗಿ ತುಳುನಾಡ ರಕ್ಷಣಾ ವೇದಿಕೆ ಘೋಷಿಸಿದೆ. ಒಂದೆಡೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆ ಆಚರಿಸುತ್ತಿದೆ. ಮತ್ತೊಂದೆಡೆ ಕರಾವಳಿಯಲ್ಲೂ ತುಳುನಾಡ ರಕ್ಷಣಾ ವೇದಿಕೆಯಿಂದಲೂ ಕರಾಳ ದಿನ ಆಚರಿಸುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವು ಸೇರಿದಂತೆ ಹಲವಾರು ಬೇಡಿಕೆಗಳನ್ನು ತುಳು ಭಾಷಿಗರು ಸರ್ಕಾರದ ಮುಂದೆ ಇಡುತ್ತಲೇ ಬಂದಿದ್ದಾರೆ. ಆದರೆ, ಅದ್ಯಾವುದೂ ಈಡೇರುತ್ತಿಲ್ಲ ಎಂಬ ಕೂಗು ನಿರಂತರವಾಗಿದೆ.
ಮೊನ್ನೆ ಮೊನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಬಂದಾಗಲೂ ಡಾ. ವೀರೇಂದ್ರ ಹೆಗ್ಗಡೆಯವರು, ಏಳೆಂಟು ವರ್ಷಗಳ ಹಿಂದೆ ನಡೆದ ವಿಶ್ವ ತುಳು ಸಮ್ಮೇಳನದ ಪ್ರಮುಖ ನಿರ್ಣಯಗಳಲ್ಲೊಂದಾದ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿರುವ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಬೇಕೆಂಬ ಮನವಿಯನ್ನು ಮತ್ತೆ ಸಲ್ಲಿಸಿದರು.
ತುಳು ಭಾಷಿಗರಿಗಿರುವುದು ಇದೊಂದೇ ಸಮಸ್ಯೆಯಲ್ಲ. ಭಾಷೆಗೆ ಮನ್ನಣೆ ನೀಡುವುದರ ಜೊತೆಗೆ ಕರಾವಳಿ ಜಿಲ್ಲೆಯಲ್ಲಿ ತಲೆ ಎತ್ತುವ ಬೃಹತ್ ಕಂಪನಿಗಳಲ್ಲಿ ತುಳುವರಿಗೆ ಉದ್ಯೋಗವಕಾಶ ನೀಡುವ ಹಲವಾರು ವರ್ಷಗಳ ಬೇಡಿಕೆಗೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನುವುದು ಕರಾವಳಿಗರ ಅಳಲಾಗಿದೆ. ತುಳುನಾಡಿನಲ್ಲಿ ಉದ್ಯೋಗ ನಿಮಿತ್ತ ಅನ್ಯಭಾಷಿಕರು ತುಂಬಿದ್ದಾರೆ. ಆದರೆ, ತಮ್ಮ ಫಲವತ್ತಾದ ಜಮೀನನ್ನು ದೇಶದ ಅಭಿವೃದ್ಧಿಗೆ ನೀಡುವ ತುಳುವರಿಗೆ ಮಾತ್ರ ಉದ್ಯೋಗ ನೀಡಲು ಹಿಂದೆ ಮುಂದೆ ನೋಡುತ್ತಾರೆ ಎಂಬ ಅವರ ಕೂಗಿಗೆ ಇಂದಿಗೂ ಪರಿಹಾರ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಕರಾವಳಿಯ ಜೀವನಾಡಿಯಾಗಿರುವ ನೇತ್ರಾವತಿ ನದಿ ತಿರುವು ಮೂಲಕ ಎತ್ತಿನಹೊಳೆ ಯೋಜನೆಗೆ ಕಾಯಕಲ್ಪ ನೀಡುತ್ತಿರುವ ಸರ್ಕಾರದ ಕಾರ್ಯತಂತ್ರವನ್ನು ತುಳುವರು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸರ್ಕಾರಕ್ಕೆ ತುಳು ರಾಜ್ಯವೆಂಬ ಪ್ರತ್ಯೇಕ ರಾಜ್ಯದ ಎಚ್ಚರಿಕೆಯನ್ನೂ ನೀಡಿದೆ.
ಇದೀಗ ನವೆಂಬರ್ ಒಂದರಂದೇ ತುಳುವರು ಕಪ್ಪು ದಿನವನ್ನು ಆಚರಿಸುತ್ತಿದ್ದಾರೆ ಎಂದು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದ್ದಾರೆ.
Click this button or press Ctrl+G to toggle between Kannada and English